ಬೆಂಗಳೂರು: ಲಂಚ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದೆ.
ಜೊತೆಗೆ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಗೆ ಜಾಮೀನು ಅರ್ಜಿ ವಜಾಗೊಳಿಸಿದರೆ ಪ್ರಕರಣದ ಮೂರನೇ ಆರೋಪಿ ಸುರೇಂದ್ರಗೆ ನ್ಯಾ.ಬಿ.ಜಯಂತ್ ಕುಮಾರ್ ಅವರು ಜಾಮೀನು ನೀಡಿದ್ದಾರೆ.
ಅರ್ಜಿದಾರ ವಿರೂಪಾಕ್ಷಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದ ಅರ್ಜಿದಾರರಿಗೆ ಟೆಂಡರ್ ಕರೆಯುವ ಅಧಿಕಾರವಿಲ್ಲ. ಅಧಿಕಾರಿಗಳಿಗೆ ಹಣ ಸಿಕ್ಕಿದೆ ಎನ್ನಲಾದ ಸ್ಥಳವು ಶಾಸಕರಿಗೆ ಸೇರಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರವೂ ಬಂಧನವಾಗಿಲ್ಲ. ಈಗಾಗಲೇ ಲೋಕಾಯುಕ್ತ ತನಿಖಾಧಿಕಾರಿಗಳು ತನಿಖೆ ಮುಕ್ತಾಯಗೊಳಿಸಿದ್ದಾರೆ. ಹೀಗಾಗಿ ಮಾಡಾಳ್ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ- ಶಾಸಕ ಮಾಡಳ್ ವಿರೂಪಾಕ್ಷಪ್ಪ ಪುತ್ರನ ವಿರುದ್ಧ ಮತ್ತೆ ಎರಡು ಎಪ್ಐಆರ್ ದಾಖಲಿಸಿದ ಲೋಕಾಯುಕ್ತ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಅಭಿಯೋಜಕ ಸಂತೋಷ್ ನಾಗರಾಳೆ ದಾಳಿ ವೇಳೆ ಹಣ ಸಿಕ್ಕಿರುವ ಮನೆಗೆ ವಿರುಪಾಕ್ಷಪ್ಪ ಅವರೇ ಮಾಲೀಕರಾಗಿದ್ದಾರೆ. ಹಣ ದೊರೆತ ಕೊಠಡಿಯಲ್ಲಿ ತಂಗುತ್ತಿದ್ದರು ಎಂದು ಪ್ರಶಾಂತ್ ಪತ್ನಿ ಹೇಳಿಕೆ ನೀಡಿದ್ದಾರೆ. ಸುಪ್ರೀಂಕೋರ್ಟ್ ನಿಯಾಮವಳಿ ಪ್ರಕಾರ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು ಎಂದು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದೆ.
ಇನ್ನೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೂಚನೆಯಂತೆ ಕಚೇರಿಯಲ್ಲಿ 40 ಲಕ್ಷ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ಗೆ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿರಾಕರಿಸಿದೆ.
ಎರಡನೇ ಆರೋಪಿಯಾದ ಪ್ರಶಾಂತ್ ತನಿಖೆಗೆ ಸರಿಯಾಗಿ ಸಹಕರಿಸಿಲ್ಲ. ಇದಲ್ಲದೆ, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ- Madal Bribe Case : ʼಮಾಡಾಳ್ʼ ಮಾಯ, ಕೋಟಿ ಕೋಟಿ ಹಣಕ್ಕಿಲ್ಲ ಸ್ಪಷ್ಟನೆ..! ಕೋರ್ಟ್ ಜಾಮೀನು ಕೊಡುತ್ತಾ..?
ಮೂರನೇ ಆರೋಪಿ ಸುರೇಂದ್ರ, ಪ್ರಶಾಂತ್ ಸೂಚನೆಯಂತೆ ಹಣವನ್ನ ವಾಹನದಲ್ಲಿ ಇಟ್ಟಿರುವುದು ಹೊರತುಪಡಿಸಿ ಬೇರೆ ಆರೋಪಗಳಿಲ್ಲ ಎಂದಿರುವ ಕೋರ್ಟ್ ಐದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಒದಗಿಸುವಂತೆ ತಿಳಿಸಿ ಸುರೇಂದ್ರಗೆ ಜಾಮೀನು ನೀಡಿ ಆದೇಶಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.