ನವದೆಹಲಿ: ದೇಶದಲ್ಲಿನ ಆರ್ಥಿಕ ಕುಸಿತಕ್ಕೆ ಮತ್ತೊಮ್ಮೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಮಟ್ಟದಲ್ಲಿನ ಉತ್ತಮ ಕಾರ್ಯತಂತ್ರದಿಂದ ಮಾತ್ರ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ತಲುಪಲು ಸಾಧ್ಯ ಎಂದು ಹೇಳಿದರು.
ಜೈಪುರದಲ್ಲಿನ ಲಕ್ಷಿಪತ್ ವಿವಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಮನಮೋಹನ್ ಸಿಂಗ್ 'ಪ್ರಸ್ತುತ ನಮ್ಮ ದೇಶ ಸ್ವಲ್ಪ ಮಟ್ಟಿಗೆ ನಿಧಾನವಾಗುತ್ತಿದೆ. ಜಿಡಿಪಿ ದರ ಕುಸಿಯುತ್ತಿದೆ. ಹೂಡಿಕೆ ದರ ಕುಂಠಿತವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆಯು ಬಿಕ್ಕಟ್ಟನ್ನು ಎದುರಿಸುತ್ತಿದೆ, ಮತ್ತು ನಿರುದ್ಯೋಗ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ 5 ಟ್ರಿಲಿಯನ್ ಆರ್ಥಿಕತೆ ಗುರಿ ಸಾಧಿಸಲು ಉತ್ತಮ ಕಾರ್ಯತಂತ್ರ ಅಗತ್ಯವೆಂದು' ತಿಳಿಸಿದರು.
ಇತ್ತೀಚಿಗಷ್ಟೇ ಮನಮೋಹನ್ ಸಿಂಗ್ ಕಳೆದ 6 ವರ್ಷಗಳಲ್ಲಿ ಮೊದಲ ಬಾರಿಗೆ ಕನಿಷ್ಠ ಮಟ್ಟಕ್ಕೆ ಇಳಿದ ಜಿಡಿಪಿ ಬೆಳವಣಿಗೆ ದರದ ಬಗ್ಗೆ ಪ್ರತಿಕ್ರಿಯಿಸಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಸರ್ಕಾರದ ಸರ್ವಾಂಗೀಣ ದುರುಪಯೋಗದಿಂದಾಗಿ ಆರ್ಥಿಕತೆ ಕನಿಷ್ಟ ಮಟ್ಟಕ್ಕೆ ತಲುಪಿದೆ ಎಂದು ಹೇಳಿದ್ದರು. ಇನ್ನು ಮುಂದುವರೆದು ದೇಶದ ಆರ್ಥಿಕತೆಯನ್ನು ಸರಿ ದಾರಿಗೆ ತರಲು ತಜ್ಞರನ್ನು ಸಂಪರ್ಕಿಸುವುದು ಸರಿ ಎಂದು ಅಭಿಪ್ರಾಯಪಟ್ಟಿದ್ದರು.