ನವದೆಹಲಿ: ಗಂಡ-ಹೆಂಡತಿ ನಡುವಿನ ಜಗಳದಲ್ಲಿ ಪತ್ನಿಯನ್ನು ಹೆದರಿಸಲು ಪತಿ ತನ್ನ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದು, ದುರಾದೃಷ್ಟವಶಾತ್ ಆ ಗುಂಡು ಬಾಲ್ಕನಿಯಲ್ಲಿ ನಿಂತಿದ್ದ ಬೇರೊಬ್ಬ ಮಹಿಳೆಗೆ ತಗುಲಿದ ಘಟನೆ ದೆಹಲಿಯಲ್ಲಿ ಶುಕ್ರವಾರ ನಡೆದಿದೆ.
ನಗರದ ನರೇಲಾ ಬಿ -2 ಪ್ರದೇಶದಲ್ಲಿ ಶುಕ್ರವಾರ ಪತಿ-ಪತ್ನಿ ನಡುವಿನ ಜಗಳವನ್ನು ಬಾಲ್ಕನಿಯಲ್ಲಿ ನಿಂತು ವೀಕ್ಷಿಸುತ್ತಿದ್ದ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ದಿನಗಳಿಂದಲೂ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ನಿನ್ನೆ ಸಹ ಆತ ಪತ್ನಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯಲು ಪ್ರಯತ್ನಿಸುತ್ತಿದ್ದರು. ಇದಕ್ಕೆ ಆಕೆ ಒಪ್ಪದ ಕಾರಣ ಕಾರಿನಿಂದ ಇಳಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆದರೆ ಆ ಗುಂಡು ಬಾಲ್ಕನಿಯಲ್ಲಿ ನಿಂತು ಗಂಡ-ಹೆಂಡತಿ ಜಗಳ ನೋಡುತ್ತಿದ್ದ ಮತ್ತೋರ್ವ ಮಹಿಳೆಯ ಹೊಟ್ಟೆಗೆ ತಗುಲಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಗೊಂಡ ಮಹಿಳೆಯನ್ನು 21 ವರ್ಷದ ರಚ್ನಾ ಎಂದು ಗುರುತಿಸಲಾಗಿದ್ದು, ಆ ವ್ಯಕ್ತಿಯ ಮನೆಯ ಮೊದಲನೇ ಮಹಡಿಯಲ್ಲಿ ವಾಸವಿದ್ದಾಳೆ ಎನ್ನಲಾಗಿದೆ. ಘಟನೆ ಬಳಿಕ ಆರೋಪಿ ತನ್ನ ಹೆಂಡತಿಯನ್ನು ಕಾರಿನಲ್ಲಿ ಕರೆದುಕೊಂಡು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.