ನವದೆಹಲಿ: ದೇಶದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳನ್ನು ನಿಷೇಧಿಸುವ ಉದ್ದೇಶ ಇಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಆಂತರಿಕ ದಹನಕಾರಿ ಎಂಜಿನ್ ವಾಹನಗಳ ಮೇಲೆ ನಿಷೇಧ ಹೇರುವ ಸಾಧ್ಯತೆಯ ಬಗ್ಗೆ ಉದ್ಯಮದ ಕಳವಳವನ್ನು ಅವರು ತಿಳಿಸಿದ ಗಡ್ಕರಿ, ಭಾರತದ ವಾಹನ ಉದ್ಯಮವು ದೇಶದ ರಫ್ತು ಮತ್ತು ಉದ್ಯೋಗಕ್ಕೆ ನೀಡುತ್ತಿರುವ ಕೊಡುಗೆಯ ಬಗ್ಗೆ ಸರ್ಕಾರಕ್ಕೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು. ರಫ್ತು ವಿಷಯದಲ್ಲಿ ಉದ್ಯಮವು ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ ಎಂದು ಅವರು ಹೇಳಿದರು.
59 ನೇ ವಾರ್ಷಿಕ ಸಿಯಾಮ್ ಸಮಾವೇಶದಲ್ಲಿ ಮಾತನಾಡಿದ ಗಡ್ಕರಿ,'ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ನಿಷೇಧಿಸಲು ಸರ್ಕಾರ ಪ್ರಸ್ತಾಪಿಸುತ್ತಿಲ್ಲ. 4.50 ಲಕ್ಷ ಕೋಟಿಮೌಲ್ಯದ ವಾಹನ ವಲಯ, ಸಾಕಷ್ಟು ಉದ್ಯೋಗಗಳನ್ನು ಒದಗಿಸುತ್ತದೆ ಮತ್ತು ರಫ್ತು ಕೂಡ ಹೆಚ್ಚಾಗಿದೆ. ಆದರೆ ಸರ್ಕಾರ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ವೆಚ್ಚ. ಎರಡನೆಯದು ಮಾಲಿನ್ಯ ಮತ್ತು ಮೂರನೆಯದು ರಸ್ತೆ ಸುರಕ್ಷತೆ ಎಂದು ಅವರು ತಿಳಿಸಿದರು.
ದೇಶದಲ್ಲಿ ವಾಹನ ಉದ್ಯಮವು 4.50 ಲಕ್ಷ ಕೋಟಿ ಮೌಲ್ಯದ್ದಾಗಿದೆ, ಮತ್ತು ಮಾಲಿನ್ಯವು ದೇಶಕ್ಕೆ ಒಂದು ಪ್ರಮುಖ ವಿಷಯವಾಗಿರುವುದರಿಂದ ಇತರ ಶುದ್ಧ ಇಂಧನ ಮೂಲಗಳಿಗೆ ಹೋಗಬೇಕಾಗಿದೆ ಎಂದು ಸಚಿವರು ಹೇಳಿದರು. ಆದಾಗ್ಯೂ ಮಾಲಿನ್ಯದ ಸಮಸ್ಯೆಗೆ ವಾಹನಗಳನ್ನು ಮಾತ್ರ ದೂರುವುದು ತರವಲ್ಲ ಎಂದು ಹೇಳಿದರು.ಆದರೆ ಅವರು ಕೂಡ ಕೆಲವು ಜವಾಬ್ದಾರಿಗಳನ್ನು ಹೊರಲಿದ್ದಾರೆ ಎಂದು ಹೇಳಿದರು.
ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ ಮತ್ತು 2018 ರಲ್ಲಿ ಅದು ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರ ₹ 50,000 ಕೋಟಿ ಯೋಜನೆಯನ್ನು ರೂಪಿಸಿತ್ತು. ಇದರ ಭಾಗವಾಗಿ ಈಗ ದೆಹಲಿಯಲ್ಲಿ ಶೇಕಡಾ 29 ರಷ್ಟು ಮಾಲಿನ್ಯವನ್ನು ನಿಯಂತ್ರಿಸಲಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಯಾಗಿದೆ ಎಂದು ಗಡ್ಕರಿ ಹೇಳಿದರು.