ದೆಹಲಿಯಲ್ಲಿನ ಅಧಿಕಾರದ ಗದ್ದುಗೆ ಉತ್ತರ ಪ್ರದೇಶದಿಂದಲೇ ನಿರ್ಧರಿತವಾಗುವಂತದ್ದು ಎನ್ನುವ ಮಾತು ಯಾವಾಗಲೂ ದೇಶದ ರಾಜಕಾರಣದಲ್ಲಿ ಚಾಲ್ತಿಯಲ್ಲಿರುವಂತಹದ್ದು, ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಪಕ್ಷವು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ನಾವು ಈ ಹಿಂದಿನಿಂದಲೂ ನೋಡುತ್ತಾ ಬಂದಿದ್ದೇವೆ.ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿನ ಅದರ ಲೆಕ್ಕಾಚಾರಕ್ಕೆ ಈ ಫಲಿತಾಂಶ ಮತ್ತಷ್ಟು ಬಲ ನೀಡಲಿದೆ.
ವಿಧಾನಸಭಾ ಚುನಾವಣೆಗೂ ಮುನ್ನ ಕೊರೊನಾ ನಿರ್ವಹಣೆ, ಹಾಗೂ ರೈತರ ಚಳುವಳಿ ವಿಚಾರದಲ್ಲಿ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿದ್ದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಈಗ ಮತ್ತೊಮ್ಮೆ ಬಹುಮತದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ, ಈಗ ಸಾಂಸ್ಕೃತಿಕವಾಗಿ ಹಿಂದು-ಮುಸ್ಲಿಂ ಸೌಹಾರ್ಧ ಪರಂಪರೆಯೊಂದಿಗೆ ಮೇಳೈಸಿದ ಗಂಗಾ-ಜಮುನಾ-ತೆಹಜೀಬ್ ಭೂಮಿಯಲ್ಲಿ ಸಿಎಂ ಯೋಗಿ ಎರಡನೇ ಬಾರಿಗೆ ಗೆದ್ದಿದ್ದು ಹೇಗೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತದೆ.ಈಗ ನಾವು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲು ಅಲ್ಲಿನ ಪ್ರತಿಪಕ್ಷಗಳ ಚುನಾವಣಾ ಪ್ರಚಾರದ ಕಾರ್ಯವೈಖರಿ ಹೇಗಿತ್ತು ಎನ್ನುವುದನ್ನು ನಾವು ಗಮನಿಸಬೇಕಾಗಿದೆ.
ಈ ಬಾರಿ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಪಣ ತೊಟ್ಟಿದ್ದ ಕಾಂಗ್ರೆಸ್ ಪಕ್ಷವು ಪ್ರಿಯಾಂಕಾ ಗಾಂಧಿಯವರಿಗೆ ಆ ರಾಜ್ಯದ ಪಕ್ಷದ ಉಸ್ತುವಾರಿಯನ್ನು ನೀಡಿತ್ತು, ಹೀಗಾಗಿ ಪಕ್ಷದ ಉಸ್ತುವಾರಿ ವಹಿಸಿಕೊಂಡಾಗಿನಿಂದಲೂ ಪ್ರಿಯಾಂಕಾ ಗಾಂಧಿ ರಾಜ್ಯದ ಉದ್ದಗಲಕ್ಕೂ ಸಂಚರಿಸುವ ಮೂಲಕ ಪಕ್ಷ ಕಟ್ಟುವ ಕೆಲಸವನ್ನು ಮಾಡಿದ್ದರು, ಇದರ ಭಾಗವಾಗಿ ಈ ಚುನಾವಣೆಯಲ್ಲಿ ಅವರು 'ಲಡ್ಕಿ ಹೂಂ ಲಡ್ ಸಕ್ತಿ ಹೂಂ' ಎನ್ನುವ ಅಭಿಯಾನದ ಮೂಲಕ ಮಹಿಳಾ ಮತದಾರದ ಮೇಲೆ ಕಣ್ಣಿಟ್ಟಿದ್ದರು, ಆದರೆ ಇದ್ಯಾವುದು ಕೂಡ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತವಾಗಿ ಪರಿವರ್ತನೆಯಾಗಲಿಲ್ಲ, 2017 ರಲ್ಲಿ ಕೇವಲ ಏಳು ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಕಾಂಗ್ರೆಸ್ ಪಕ್ಷ, ಈಗ ಕೇವಲ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ಕಳೆದ ಚುನಾವಣೆಗಿಂತ ಅದರ ಮತ ಗಳಿಕೆ ಶೇ 2 ರಷ್ಟು ಕುಸಿತವಾಗಿದೆ.
ಇದನ್ನೂ ಓದಿ: 'ನಮ್ಮ ಕಠಿಣ ಪರಿಶ್ರಮವನ್ನು ಮತಗಳಾಗಿ ಪರಿವರ್ತಿಸಲು ಪಕ್ಷಕ್ಕೆ ಸಾಧ್ಯವಾಗಲಿಲ್ಲ'
ಇನ್ನೊಂದೆಡೆಗೆ ಈ ಬಾರಿ ಗೆಲುವಿನ ಲೆಕ್ಕಾಚಾರದಲ್ಲಿದ್ದ ಸಮಾಜವಾದಿ ಪಕ್ಷವು 2017 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೂ ಕೂಡ ಬಿಜೆಪಿಗೆ ಅದು ಅಷ್ಟೊಂದು ಸವಾಲಾಗಿ ಪರಿಣಮಿಸಲಿಲ್ಲ, ಈ ಬಾರಿ ಪಶ್ಚಿಮ ಉತ್ತರ ಪ್ರದೇಶದ ಭಾಗದಲ್ಲಿ ಪ್ರಬಲವಾಗಿರುವ ರಾಷ್ಟ್ರೀಯ ಲೋಕದಳ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿತ್ತು, ಈ ಮೈತ್ರಿಯ ಭಾಗವಾಗಿ ಎಸ್ಪಿ 111 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್ಎಲ್ಡಿ 8 ಸ್ಥಾನಗಳನ್ನು ಗೆದ್ದಿದೆ.ಇನ್ನೂ ಈ ಹಿಂದೆ ಬ್ರಾಹ್ಮಣ ಹಾಗೂ ದಲಿತ ಮತಗಳ ಕೇಂದ್ರೀಕರಣದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಅದರ ಪ್ರಚಾರ ವೈಖರಿಯಂತೂ ಯುದ್ಧಕ್ಕೆ ಇಳಿಯುವ ಮೊದಲೇ ಶತ್ರಾಸ್ತ್ರವನ್ನು ತ್ಯಜಿಸಿದ ರೀತಿಯಲ್ಲಿತ್ತು, ಹಾಗಾಗಿ ಈಗ ಅದು ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಡುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿದೆ.
ಇತ್ತ ಬಿಜೆಪಿ ಪಕ್ಷವು ಅಪ್ನಾದಳ ಹಾಗೂ ನಿಂಶಾದ್ ಪಕ್ಷದ ಜೊತೆಗಿನ ಮೈತ್ರಿಯಿಂದಾಗಿ ಬಿಜೆಪಿ 255, ಅಪ್ನಾ ದಳ 12, ಹಾಗೂ ನಿಂಶಾದ್ ಪಕ್ಷವು 6 ಸ್ಥಾನಗಳಲ್ಲಿ ಗೆಲವು ಸಾಧಿಸುವಲ್ಲಿ ಯಶಸ್ವಿಯಾಗಿವೆ. 2017 ರಲ್ಲಿ ಗಳಿಸಿದ್ದಕಿಂತ 57 ಸೀಟುಗಳು ಕಡಿಮೆಯಾಗಿದ್ದರೂ ಕೂಡ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿನ ಬಿಜೆಪಿ ಸರ್ಕಾರ ಮತದಾರನ ನಾಡಿ ಮಿಡಿತವನ್ನು ಹಿಡಿದದ್ದು ಹೇಗೆ? ಎನ್ನುವ ಪ್ರಶ್ನೆ ನಮಗೆ ಎದುರಾಗುತ್ತದೆ.ಈಗ ನಾವು ಇಂತಹ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ, ಈ ಕೆಳಗಿನ ಅಂಶಗಳನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕಾಗಿದೆ.
ಇದನ್ನೂ ಓದಿ: ಪಂಚರಾಜ್ಯ ಫಲಿತಾಂಶ.. ಆತ್ಮಾವಲೋಕನಕ್ಕೆ ಶೀಘ್ರದಲ್ಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ!
ಜಾತಿ ಲೆಕ್ಕಾಚಾರ:
ಈ ಬಾರಿಯ ಚುನಾವಣೆಯಲ್ಲಿ ಎಂದಿನಂತೆ ಬ್ರಾಹ್ಮಣ ಮತಗಳು ಸಾಂಪ್ರದಾಯಿಕವಾಗಿ ಬಿಜೆಪಿಯನ್ನು ಬೆಂಬಲಿಸಿವೆ, ಇನ್ನೊಂದೆಡೆಗೆ ಎಸ್ಪಿಯಿಂದ ಯಾದವ್ ಮತ್ತು ಬಿಎಸ್ಪಿಯಿಂದ ಜಾಟವ್ ಮತ್ತು ಜಾಟವೇತರ ಸಮುದಾಯಗಳ ಬೆಂಬಲವನ್ನು ಗಳಿಸುವಲ್ಲಿ ಅದು ಯಶಸ್ವಿಯಾಗಿದೆ.ಈ ಬಾರಿ ಬಿಎಸ್ಪಿ 1 ಸ್ಥಾನಕ್ಕೆ ತೃಪ್ತಿಪಟ್ಟಿರುವುದನ್ನು ನೋಡಿದರೆ ದಲಿತ ಸಮುದಾಯದ ಮತಗಳು ಸಂಪೂರ್ಣವಾಗಿ ಬಿಜೆಪಿ ತೆಕ್ಕೆಗೆ ಹೋಗಿರುವುದನ್ನು ಈಗಿನ ಫಲಿತಾಂಶವು ಹೇಳುತ್ತದೆ.
ಅಭಿವೃದ್ದಿ ಮಂತ್ರ:
ಕೊರೊನಾ ಉತ್ತುಂಗದಲ್ಲಿದ್ದಾಗ ಯೋಗಿ ಸರ್ಕಾರವು 10 ಕೆಜಿ ಪಡಿತರ ಹಾಗೂ ಖಾದ್ಯ ತೈಲವನ್ನು ವಿತರಿಸಿರುವುದು ಚುನಾವಣೆಯಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸಿದೆ.ಇನ್ನೊಂದೆಡೆಗೆ ಮಹಿಳೆಯರಿಗೆ ರೈತರಿಗೆ, ಬಡ ಜನರಿಗೆ ಲಾಭಾರ್ತಿ ಯೋಜನೆಯು ಅಲ್ಪಾವಧಿಯಲ್ಲಿ ನೆರವಾಗಿದ್ದರಿಂದಾಗಿ ಜನಸಾಮಾನ್ಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಹಿಂದುತ್ವದ ರಾಜಕಾರಣ :
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಿಂದುತ್ವದ ರಾಜಕಾರಣ ಯಾವಾಗಲೂ ಮುನ್ನಲೆಯಲ್ಲಿದೆ, ಅಲ್ಲಿ ಅದು ಮಂದಿರ್-ಮಸೀದಿಯಂತಹ ವಿಷಯಗಳ ಮೂಲಕವೇ ಪ್ರವೇಶವಾಗಿರುವುದನ್ನು ನಾವು ಕಾಣಬಹುದು.ಇದು ಚುನಾವಣಾ ರಾಜಕೀಯದ ಲೆಕ್ಕಾಚಾರದಲ್ಲಿ ಬಿಜೆಪಿಗೆ ಯಾವಾಗಲೂ ವರವಾಗುತ್ತಲೇ ಬಂದಿದೆ.ಇದಕ್ಕೆ ಪೂರಕವಾಗಿ ಈ ಬಾರಿಯ ಚುನಾವಣಾ ಪ್ರಚಾರದುದ್ದಕ್ಕೂ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುವುದನ್ನು ಬಳಸಿಕೊಂಡಿತು.ಈ ವಿಚಾರವಾಗಿ ಪ್ರತಿಪಕ್ಷಗಳನ್ನು ಪ್ರಚಾರದುದ್ದಕ್ಕೂ ಯೋಗಿ ಆದಿತ್ಯನಾಥ್ ಟೀಕಿಸುತ್ತಾ ಬಂದಿದ್ದರು.ಇನ್ನೂ ಲೋಕಸಭಾ ಚುನಾವಣೆಗೆ ಮುನ್ನ ಮಂದಿರ ನಿರ್ಮಾಣ ಕಾರ್ಯವನ್ನು ಮುಗಿಸುವ ಭರವಸೆ ನೀಡಿರುವ ಬಿಜೆಪಿ ಇದನ್ನೂ ಮುಂಬರುವ ಚುನಾವಣೆಯಲ್ಲಿಯೂ ಬಳಸಿಕೊಳ್ಳುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.