ನವದೆಹಲಿ: ಸಾರ್ವತ್ರಿಕ ಚುನಾವಣೆಗೂ ಮೊದಲು ಕೊನೆಯ ಬಾರಿಗೆ ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಆತ್ಮ ವಿಶ್ವಾಸವು ಸಾರ್ವಕಾಲಿಕ ಎತ್ತರದಲ್ಲಿರುವುದು ಉತ್ತಮ ಸಂಕೇತ. ಏಕೆಂದರೆ ಇಂತಹ ಆತ್ಮವಿಶ್ವಾಸವು ಅಭಿವೃದ್ಧಿಗೆ ಸಹಾಯಕಾರಿಯಾಗಲಿದೆ ಎಂದು ತಿಳಿಸಿದರು.
ಈ 16 ಲೋಕಸಭೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ,ಏಕೆಂದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸದಸ್ಯರು(44) ಲೋಕಸಭೆಗೆ ಚುನಾಯಿತರಾಗಿದ್ದಾರೆ ಎಂದು ಮೋದಿ ಹೇಳಿದರು.ಇದೇ ವೇಳೆ ಜಾಗತಿಕ ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ ಮೋದಿ ಈ ವಿಶ್ವ ಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಂತರಾಷ್ಟ್ರೀಯ ಸೌರ ಒಕ್ಕೂಟ ರಚನೆಗೆ ಭಾರತ ಪ್ರಯತ್ನ ಪಡುತ್ತಿದೆ ಎಂದರು.
ಈ ಸದನ ಕಪ್ಪುಹಣ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಕಾಯ್ದೆಗಳನ್ನು ಜಾರಿಗೆ ತಂದಿದೆ.ಅಲ್ಲದೆ ಜಿಎಸ್ಟಿ ಕಾಯ್ದೆಯನ್ನು ಜಾರಿಗೊಳಿಸಿದೆ.ಇನ್ನು ಸಂಸದರು ತಮ್ಮ ಸಂಬಳವನ್ನು ತಾವೇ ನಿರ್ಧರಿಸಿಕೊಳ್ಳುವ ವಿಚಾರವಾಗಿ ಟೀಕೆಗಳು ಕೇಳಿ ಬರುತ್ತಿವೆ ಆದ್ದರಿಂದ ಇನ್ಮುಂದೆ ಬೇರೆಯವರ ಸಂಬಳ ಏರಿಕೆಯಾದಂತೆ ಸಂಸತ್ ಸದಸ್ಯರ ಸಂಬಳವೂ ಹೆಚ್ಚಳ ಮಾಡುವ ಮೂಲಕ ಈ ಲೋಕಸಭಾ ಸಂಸದರನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಲಿದೆ ಎಂದು ಪ್ರಧಾನಿ ತಿಳಿಸಿದರು.
ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿ ನಂತರ ರಾಹುಲ್ ಗಾಂಧಿಯವರ ಕಣ್ಸನ್ನೆ ಮತ್ತು ಅಪ್ಪುಗೆ ವಿಚಾರವಾಗಿ ಮಾತನಾಡುತ್ತಾ " ನಾನು ಮೊದಲ ಬಾರಿಗೆ ಕಣ್ಣಿನಿಂದ ಆಗುವ ತಪ್ಪುಗಳ ಬಗ್ಗೆ ಇಲ್ಲಿ ಕಲಿತಿದ್ದೇನೆ " ಎಂದು ವ್ಯಂಗ್ಯವಾಡಿದರು.