ನವದೆಹಲಿ: ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಂದ ನಾನು ತುಂಬಾ ಕಲಿತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಇಲ್ಲಿನ ಜವಾಹರಲಾಲ್ ನೆಹರು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸುಷ್ಮಾ ಸ್ವರಾಜ್ ಅವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸುಷ್ಮಾ ಸ್ವರಾಜ್ ಅವರು ವಯಸ್ಸಿನಲ್ಲಿ ನನಗಿಂತ ಕಿರಿಯವರಾದರೂ ಅವರಿಂದ ನಾನು ಬಹಳ ಕಲಿತಿದ್ದೇನೆ. ಅವರೊಬ್ಬ ಅದ್ಭುತ ವಾಗ್ಮಿ. ಅವರೆಲ್ಲೇ ಹೋದರೂಗೌರವ ಮತ್ತು ಮೆಚ್ಚುಗೆಗೆ ಪಾತ್ರರಾಗುತ್ತಾರೆ. ತಮ್ಮ ಅಭಿಪ್ರಾಯಗಳಿಗೆ, ನಿರ್ಧಾರಗಳಿಗೆ ಸದಾ ಬದ್ಧರಾಗಿರುತ್ತಿದ್ದ ಸುಷ್ಮಾ ಸ್ವರಾಜ್ ಅವರ ಭಾಷಣಗಳು ಪರಿಣಾಮಕಾರಿ ಮಾತ್ರವಲ್ಲದೆ ಸ್ಫೂರ್ತಿದಾಯಕವೂ ಆಗಿದ್ದವು ಎಂದು ಮೋದಿ ಹೇಳಿದರು.
ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಬೇಕಾದ ಸಂದರ್ಭವನ್ನು ವಿವರಿಸಿದ ಪ್ರಧಾನಿ ಮೋದಿ, ಅಂದು ನಾನು ಮಾಡಬೇಕಾದ ಭಾಷಣವನ್ನು ಸ್ವರಾಜ್ ಹಿಂದಿನ ದಿನ ಸಿದ್ಧಪಡಿಸಿದ್ದರು. "ಭಾರತದ ದೃಷ್ಟಿಕೋನಗಳನ್ನು ಪ್ರಪಂಚದ ಮುಂದಿಡಬೇಕು. ಹಾಗಾಗಿ ನನ್ನ ಮನಸ್ಸಿನಲ್ಲಿ ಇರುವುದನ್ನು ಮಾತನಾಡಲು ಸಾಧ್ಯವಿಲ್ಲ ಎಂದು ಅವರು ನನಗೆ ಹೇಳಿದ್ದರು. ಆಗ ನಾನು, ಬರೆದದ್ದನ್ನು ಓದುವುದು ನನಗೆ ಕಷ್ಟ ಎಂದು ಆಗ ಅಂದು ರಾತ್ರಿ ನನ್ನೊಂದಿಗೆ ಕುಳಿತು ಸ್ವರಾಜ್ ಅವರು ಭಾಷಣದ ಕರಡನ್ನು ಸಿದ್ಧಪಡಿಸಿದರು. ನಾನು ಏನು ಹೇಳಬೇಕೆಂದಿದ್ದೆನೋ, ಅದನ್ನು ಹೇಳಲೇಬೇಕೆಂದು ಹೇಳಿದೆ. ಅದಕ್ಕೆ ತಕ್ಕಂತೆ ಭಾಷಣ ಸಿದ್ದಪದಿಸಿದರು" ಎಂದು ಮೋದಿ ಹೇಳಿದರು.
ಸುಷ್ಮಾ ಸ್ವರಾಜ್ ಅವರು ಎಲ್ಲರ ಬಗ್ಗೆ ತಾಯಿಯ ವಾತ್ಸಲ್ಯ ಹೊಂದಿರುವ ಉತ್ತಮ ವ್ಯಕ್ತಿ ಎಂದು ಶ್ಲಾಘಿಸಿದ ಪ್ರಧಾನಿ ಮೋದಿ, ಅವರು ಶ್ರದ್ಧೆಯಿಂದ ಸೇವೆ ಸಲ್ಲಿಸಿದ ಭಾರತದ ಅತ್ಯುತ್ತಮ ನಾಯಕಿ ಎಂದು ಹೇಳಿದರು.
ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸೂರಿ ಮತ್ತು ಪತಿ ಸ್ವರಾಜ್ ಕೌಶಲ್, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.