ನವದೆಹಲಿ: ಜಮ್ಮು-ಶ್ರೀನಗರದಲ್ಲಿ ಮೊದಲ ಹಿಮಪತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಮೊಘಲ್ ರಸ್ತೆಯಲ್ಲಿ ಮುಂದೆ ಚಲಿಸಲಾಗದೆ ತೊಂದರೆಯಲ್ಲಿದ್ದ 140 ವಾಹನ ಚಾಲಕರು ಮತ್ತು ಸಹ ಚಾಲಕರನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರನ್ನು ರಕ್ಷಿಸುವ ಕಾರ್ಯದಲ್ಲಿ ಭಾರತೀಯ ಸೇನೆ ಮತ್ತೊಮ್ಮೆ ಯಶಸ್ವಿಯಾಗಿದೆ. ಭಾರತೀಯ ಸೇನಾ ಸಿಬ್ಬಂದಿ ಮತ್ತು ಇತರ ಸ್ಥಳೀಯರ ಸಹಾಯದಿಂದ ಹಿಮಪಾತ ಸಂತ್ರಸ್ಥರನ್ನು ರಕ್ಷಿಸಲಾಗಿದ್ದು, ಅವರನ್ನು ತಮ್ಮ ಕ್ಯಾಪ್ಗಳಿಗೆ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ಅಗತ್ಯವಾದ ಆಹಾರ ಹಾಗೂ ಇತರ ಸೌಕರ್ಯಗಳನ್ನೂ ಒದಗಿಸುತ್ತಿದ್ದಾರೆ.
ಭಾರತೀಯ ಸೇನಾ ಸಿಬ್ಬಂದಿಯ ಸಮಯ ಪ್ರಜ್ಞೆ ಮತ್ತು ಸಹಕಾರವನ್ನು ಶ್ಲಾಘಿಸಿರುವ ವಾಹನ ಚಾಲಕರು, ಸೇನಾ ಸಿಬ್ಬಂದಿ ನಮ್ಮ ಪ್ರಾಣ ಉಳಿಸಿದರು. ಇಲ್ಲವಾಗಿದ್ದರೆ ನಾವು ಜೀವಂತವಾಗಿ ಉಳಿಯುತ್ತಿರಲಿಲ್ಲ ಎಂದಿದ್ದಾರೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಹಿಮಪಾತದಿಂದಾಗಿ ಶ್ರೀನಗರದಲ್ಲಿ ಸಂಚಾರ ಅಸ್ತವ್ಯಸ್ಥವಾಗಿದೆ. ಇತರ ರಾಜ್ಯಗಲಿದ ಕಾಶ್ಮೀರದ ಕಡೆಗೆ ಆಗಮಿಸುತ್ತಿದ್ದ ನೂರಾರು ಟ್ರಕ್ಗಳು ಹಿಮಪಾತದಲ್ಲಿ ಸಿಲುಕಿಕೊಂಡಿವೆ. ಹೀಗಾಗಿ ಜಿಲ್ಲೆಯ ಮೊಘಲ್ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ.