ಮುಂಬೈ: ಕಳೆದ ವಾರ ಸುಮಾರು 12 ಗಂಟೆಗಳ ಕಾಲ ಕೂದಲಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 43 ರ ಹರೆಯದ ಮುಂಬೈ ಉದ್ಯಮಿಯೊಬ್ಬರು ಕೂದಲು ಕಸಿ ಮಾಡಿಸಿದ ಎರಡೇ ದಿನದಲ್ಲಿ ಪೌಯಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರವಣ್ ಕುಮಾರ್ ಚೌಧರಿ ಎಂದು ಗುರುತಿಸಲಾಗಿರುವ ಉದ್ಯಮಿಯು ಮಾರ್ಚ್ 7 ರಂದು ಕೇಂದ್ರ ಮುಂಬಯಿಯ ಚಿಂಚ್ಪೋಕ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕೂದಲು ಕಸಿ ಸೆಷನ್ ನಲ್ಲಿ ಭಾಗವಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಖಿನಕ ನಿವಾಸಿಯಾಗಿರುವ ಚೌಧರಿ ಅವರ ಕೂದಲು ಕಸಿ ಶಸ್ತ್ರ ಚಿಕಿತ್ಸೆಯು ಮಾರ್ಚ್ 8ರಂದು ಶುಕ್ರವಾರ ಬೆಳಿಗ್ಗೆ 2:30 ಕ್ಕೆ ಮುಗಿದಿತ್ತು, ಬಳಿಕ ಅವರಿಗೆ ಅಲರ್ಜಿ ಕಾಣಿಸಿಕೊಂಡಿತು. ಮರುದಿನ ಚೌಧರಿಯವರನ್ನು ಪೌಯಿ ಉಪನಗರ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಅವರಿಗೆ ಉಸಿರಾಟ ತೊಂದರೆ ಜೊತೆಗೆ ಗಂಟಲು ಮತ್ತು ಮುಖದಲ್ಲಿ ಊತ ಕಂಡು ಬಂದಿತ್ತು ಎನ್ನಲಾಗಿದೆ.
ಅಲರ್ಜಿಯಿಂದ ಬಳಲುತ್ತಿದ್ದ ಚೌಧರಿ ಶನಿವಾರ (ಮಾರ್ಚ್ 9) ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಉದ್ಯಮಿಗೆ ಗಂಭೀರ ಜೀವ ಬೆದರಿಕೆಯ ಅನಾಫಿಲಾಕ್ಸಿಸ್ ಎಂಬ ಅಲರ್ಜಿ ಲಕ್ಷಣಗಳು ಕಾಣಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಮ್ಮ ತನಿಖೆ ಮುಂದುವರೆಸಿದ್ದಾರೆ.
ಚೌಧರಿ ಕೂದಲು ಕಸಿ ಚಿಕಿತ್ಸೆಗೆ ಒಳಗಾಗಿದ್ದ ಕ್ಲಿನಿಕ್ ನ ಚರ್ಮರೋಗ ವೈದ್ಯರ ಪ್ರಕಾರ, ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಉದ್ಯಮಿಯು ಒಂದೇ ಬಾರಿಗೆ 9000 ಕೂದಲನ್ನು ಕಸಿ ಮಾಡಲು ಬಯಸಿದ್ದರು ಎಂದು ತಿಳಿದುಬಂದಿದೆ.
ವೈದ್ಯಕೀಯ ಸಲಹೆ ಪ್ರಕಾರ, ಒಂದೇ ಬಾರಿಗೆ 3000ಕ್ಕಿಂತ ಹೆಚ್ಚು ಕೂದಲನ್ನು ಕಸಿ ಮಾಡುವುದು ಸೂಕ್ತವಲ್ಲ, ಆದರೆ ಚೌಧರಿಯವರು ಸುಮಾರು 12 ಗಂಟೆಗಳ ಕಾಲ ಕಸಿ ಮಾಡುವಿಕೆಗೆ ಒಳಗಾಗಿದ್ದಾರೆ.
ಉದ್ಯಮಿಯ ಸಾವಿಗೆ ನಿಖರವಾದ ಕಾರಣ ಏನೂ ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.