ಭುವನೇಶ್ವರ: ಮಿಸ್ ಇಂಡಿಯಾ, ಮಿಸ್ ವರ್ಲ್ಡ್, ಫೆಮಿನಾ ಮಿಸ್ ಇಂಡಿಯಾ, ಮಿಸ್ ಬೆಂಗಳೂರು...ಹೀಗೆ ಹತ್ತು ಹಲವು ಸೌಂದರ್ಯ ಸ್ಪರ್ಧೆಗಳು ನಡೆಯುವ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ, ಬುಡಕಟ್ಟು ಮಹಿಳೆಯರ ಸೌಂದರ್ಯ ಸ್ಪರ್ಧೆ ಬಗ್ಗೆ ಕೇಳಿದ್ದಿರಾ? ಅಂತಹ ವಿಶೇಷವಾದ ಸೌಂದರ್ಯ ಸ್ಪರ್ಧೆಗೆ ಸಾಕ್ಷಿಯಾಗಿದ್ದು, ಭುವನೇಶ್ವರದ ಉತ್ಕಲ್ ಮಂದೀಪ್'ನಲ್ಲಿ ಭಾನುವಾರ ನಡೆದ ಆದಿ ರಾಣಿ ಕಳಿಂಗಾ ಬುಡಕಟ್ಟು ಮಹಿಳೆಯರ ಸೌಂದರ್ಯ ಸ್ಪರ್ಧೆ!
ಬುಡಕಟ್ಟು ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಭಾರತದಲ್ಲಿ ಇದೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯರಿಗಾಗಿಯೇ ಏರ್ಪಡಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ಒಡಿಶಾದ ಕೊರಾಪುಟ್ ಜಿಲ್ಲೆಯ ಪಲ್ಲವಿ ದುರುವಾ 'ಆದಿ ರಾಣಿ' ಕಿರೀಟ ಮುಡಿಗೇರಿಸಿಕೊಂಡರು. ತಿತ್ಲಾಘರ್'ನ ಪಂಚಮಿ ಮಜ್ಹಿ ಮೊದಲ ರನ್ನರ್ ಅಪ್ ಆಗಿ ಹಾಗೂ ಮಯೂರ್ಭಂಜ್'ನ ರಶ್ಮಿರೇಖಾ ಎರಡನೇ ರನ್ನರ್ ಅಪ್ ಸ್ಥಾನ ಗಳಿಸಿಕೊಂಡರು. ಈ ಸ್ಪರ್ಧೆಗೆ 25 ರಾಜ್ಯಗಳಿಂದ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಆದಿ ರಾಣಿ ಕಿರೀಟ ವಿಜೇತೆ ಪಲ್ಲವಿ ಮಾತನಾಡಿ, "ನನ್ನಂತಹ ಸಾಕಷ್ಟು ಬುಡಕಟ್ಟು ಮಹಿಳೆಯರಿಗೆ ಹೊರಗೆ ಹೋಗುವ ಅಥವಾ ಓದುವ ಅವಕಾಶ ದೊರೆಯುವುದಿಲ್ಲ. ಬಹುಶಃ ಈ ಸ್ಪರ್ಧೆಯಲ್ಲಿ ಗೆದ್ದ ನಂತರ ನಾನು ಇತರರಿಗೆ ಉತ್ತಮ ಉದಾಹರಣೆ ಆಗುತ್ತೇನೆ ಮತ್ತು ಇತರರೂ ಸಹ ತಮ್ಮ ಮೂಢನಂಬಿಕೆಗಳನ್ನು ತೊಡೆದು ಹಾಕಿ ದೇಶವನ್ನು ಎದುರಿಸುತ್ತಾರೆ ಎಂಬ ಭರವಸೆಯಿದೆ" ಎಂದು ಹೇಳಿದರು.