ನವದೆಹಲಿ: 1947 ರಲ್ಲಿ ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ದೃಷ್ಟಿಹೀನರಾಗಿದ್ದುದೇ ವಿಭಜನೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರಿಗೆ ದೂರದೃಷ್ಟಿ ಇಲ್ಲದಿದ್ದುದೇ ಕರ್ತಾರ್ಪುರ ಇಂದು ಪಾಕಿಸ್ತಾನದಲ್ಲಿ ಇರುವಂತಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಹನುಮಾನ್ಗರ್ ನಲ್ಲಿ ಏರ್ಪಡಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಪ್ರಧಾನಿ ಮೋದಿ, ಅಂದು ವಿಭಜನೆ ಸಂದರ್ಭದಲ್ಲಿ ಕರ್ತಾರ್ಪುರದಲ್ಲಿರುವ ಗುರುದ್ವಾರಕ್ಕೆ ಸಿಖ್ ಯಾತ್ರಿಕರು ಹೋಗುತ್ತಾರೆ ಎಂಬ ದೂರದೃಷ್ಟಿ ಕಾಂಗ್ರೆಸ್ ಗೆ ಇರಲಿಲ್ಲವೇ? ಕರ್ತಾರ್ಪುರ ಭಾರತದಲ್ಲಿರಬೇಕು ಎಂಬ ಜ್ಞಾನ ಕಾಂಗ್ರೆಸ್ ಗೆ ಇರಲಿಲ್ಲವೇ? 70 ವರ್ಷಗಳಿಂದ ಕಾಂಗ್ರೆಸ್ ಮಾಡಿದ್ದೇನು? ಎಂದು ಪ್ರಶ್ನಿಸಿದರು.
ಮುಂದುವರೆದು ಮಾತನಾಡುತ್ತಾ, ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಶಂಕು ಸ್ಥಾಪನಾ ಕಾರ್ಯಕ್ರಮಕ್ಕಾಗಿ ಭಾರತವನ್ನು ಪ್ರತಿನಿಧಿಸಲು ಪಾಕಿಸ್ತಾನಕ್ಕೆ ತೆರಳಿದ್ದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯವರು ಈ ಹಿಂದೆ ಹೇಳಿಕೆಯೊಂದನ್ನು ನೀಡಿದ್ದರು. ಹಲವು ವರ್ಷಗಳ ಹಿಂದೆಯೇ ಕರ್ತಾರ್ಪುರ ಕಾರಿಡಾರ್ ಯೋಜನೆ ಆಗಬೇಕಿತ್ತು. ಗಡಿ ರೇಖೆ ಹಾಕಿದ್ದ ವ್ಯಕ್ತಿ ಮೂಲಭೂತ ತಪ್ಪು ಮಾಡಿದ್ದ ಎಂದು ಹೇಳಿದ್ದರು.