ಕೊಚ್ಚಿ / ತಿರುಪತಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದಕ್ಷಿಣ ಭಾರತದ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಕೇರಳದ ಗುರುವಾಯೂರಿನ ಶ್ರೀ ಕೃಷ್ಣ ಮಂದಿರ ಮತ್ತು ಆಂಧ್ರ ಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರನಿಗೆ ಪೂಜೆ-ಅರ್ಚನೆ ನೆರವೇರಿಸಲಿದ್ದಾರೆ. ಪ್ರಧಾನಿ ಮೋದಿ ಶನಿವಾರ ಗುರುವಾಯೂರ್ ಶ್ರೀ ಕೃಷ್ಣ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದು, ಭಾನುವಾರ ವಂಕೇಶ್ವರ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಕೊಚ್ಚಿಯ ಅಧಿಕಾರಿಯೊಬ್ಬರು ತಿಳಿಸಿರುವ ಮಾಹಿತಿ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ರಾತ್ರಿ 11.35 ಕ್ಕೆ ಕೊಚ್ಚಿ ತಲುಪಲಿದ್ದಾರೆ. ರಾತ್ರಿಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಬೆಳಗ್ಗೆ ಶ್ರೀ ಕೃಷ್ಣ ದೇವಾಲಯದಲ್ಲಿ ಪೂಜೆ ಮಾಡುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಜೂನ್ 9 ರಂದು ತಿರುಮಲದಲ್ಲಿರುವ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ನೆರವೇರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ವಾರಾಂತ್ಯದಲ್ಲಿ ಮಾಲ್ಡೀವ್ಸ್ ಮತ್ತು ಶ್ರೀಲಂಕಾಕ್ಕೆ ಭೇಟಿ ನೀಡಿದ ನಂತರ, ಪ್ರಧಾನ ಮಂತ್ರಿ ಕೊಲಂಬೋದಿಂದ ತಿರುಪತಿಯ ಬಳಿ ರೆನಿಗುಂಟಾ ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ಆಗಮಿಸಲಿದ್ದಾರೆ. ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಅಲ್ಲಿಂದ ದೆಹಲಿಗೆ ಮರಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿವೆ.
ಪ್ರಧಾನ ಮಂತ್ರಿಯ ಭೇಟಿ ಹಿನ್ನೆಲೆಯಲ್ಲಿ ವಿಮಾನನಿಲ್ದಾಣ, ದೇವಸ್ಥಾನ ಎಲ್ಲೆಡೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ತಿರುಪತಿಗೆ ಪ್ರಧಾನಿ ಮೋದಿ ಭೇಟಿ ನೀಡುವ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮತ್ತು ಗವರ್ನರ್ ಇಎಸ್ಎಲ್ ನರಸಿಂಹನ್ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.