ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಹಿಂಸಾಚಾರದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಚುನಾವಣಾ ಆಯೋಗ ಇಂದು(ಗುರುವಾರ) ರಾತ್ರಿ 10 ಗಂಟೆಯಿಂದಲೇ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಎಳೆದಿದೆ.
ಲೋಕಸಭಾ ಚುನಾವಣೆ 2019ರ ಏಳನೇ ಹಾಗೂ ಕಡೆಯ ಹಂತದ ಮತದಾನ ಮೇ 19ರಂದು ನಡೆಯಲಿರುವ ಬೆನ್ನಲೇ ಕೇಂದ್ರ ಚುನಾವಣಾ ಆಯೋಗ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಹೀಗಾಗಿ ಬರಾಸತ್, ಬಸೀರಹಾತ್, ಜಯನಗರ, ಮಥುರಾಪುರ್, ಜಾದವ್ ಪುರ, ಡೈಮಂಡ್ ಹಾರ್ಬರ್, ದಕ್ಷಿಣ ಮತ್ತು ಉತ್ತರ ಕೋಲ್ಕತ್ತಾದಲ್ಲಿ ಇಂದು ರಾತ್ರಿ 10 ಗಂಟೆಯಿಂದಲೇ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದೆ.
ವಾಸ್ತವವಾಗಿ, ಮಂಗಳವಾರ ಕೊಲ್ಕತ್ತಾದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರೋಡ್ ಶೋನಲ್ಲಿ, ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಹಿಂಸಾಚಾರ ನಡೆದಿತ್ತು. ಅಲ್ಲದೆ, ವಿದ್ಯಾಸಾಗರ ಅವರ ಮೂರ್ತಿ ಭಗ್ನಗೊಳಿಸಲಾಗಿತ್ತು. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಅಲ್ಲದೆ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಹೀಗಾಗಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ನಡೆಸುವ ಚುನಾವಣಾ ರ್ಯಾಲಿಗಳು, ಸಭೆ, ಸಮಾವೇಶ, ರೋಡ್ ಶೋಗಳನ್ನು ಇಂದು ರಾತ್ರಿಯೇ ಕೊನೆಗೊಳಿಸುವಂತೆ ಚುನಾವಣಾ ಆಯೋಗ ಆದೇಶಿಸಿದೆ.