ನವದೆಹಲಿ: ಕಾಂಗ್ರೆಸ್ ಪಕ್ಷವು ಯಾವುದೇ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಹುಲ್ ಗಾಂಧಿ ಇನ್ನೂ ನಮ್ಮ ನಾಯಕರಾಗಿದ್ದಾರೆ, ಭವಿಷ್ಯದಲ್ಲಿಯೂ ನಮ್ಮ ನಾಯಕರಾಗಿಯೇ ಇರುತ್ತಾರೆ ಎಂದಿದ್ದಾರೆ.
ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಗಹ್ಲೋಟ್, "ಕಾಂಗ್ರೆಸ್ ಪಕ್ಷವು ಯಾವುದೇ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿಲ್ಲ ಮತ್ತು ಹೊಸ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. "ರಾಹುಲ್ ಅವರು ಪಕ್ಷದ ನಾಯಕರಾಗಿದ್ದಾರೆ ಮತ್ತು ಮುಂದೆಯೂ ಸಹ ನಮ್ಮ ನಾಯಕರಾಗಿಯೇ ಇರುತ್ತಾರೆ. ಕಳೆದ ತಿಂಗಳು ಇಲ್ಲಿ ಪಕ್ಷದ ಕಚೇರಿಯ ಪ್ರದರ್ಶನ ಸಂದರ್ಭದಲ್ಲಿ ನಾನು ಇದನ್ನು ಹೇಳಿದ್ದೇನೆ" ಎಂದು ಹೇಳಿದರು.
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಹೊಸ ಅಧ್ಯಕ್ಷರನ್ನು ನೇಮಿಸುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ರಾಹುಲ್ ಕಳೆದ ತಿಂಗಳು ತಮ್ಮ ರಾಜೀನಾಮೆ ಪತ್ರವನ್ನು ಬಹಿರಂಗಪಡಿಸಿದ್ದರು. ರಾಹುಲ್ ಗಾಂಧಿಯನ್ನು ಬೆಂಬಲಿಸಿ ಗೆಹ್ಲೋಟ್, "ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೋರಾಡಲು ಅವರಿಗೆ ಧೈರ್ಯವಿದೆ" ಎಂದು ಹೇಳಿದರು.
ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಾ, ಲೋಕಸಭಾ ಚುನಾವಣೆಗೆ ಹೋರಾಡಲು ಬಿಜೆಪಿ ಸಶಸ್ತ್ರ ಪಡೆಗಳನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದರು. "ಯಾರು ಎಷ್ಟೇ ಎತ್ತರಕ್ಕೆ ಸಾಗಿದರೂ, ಮುಂದೊಂದು ದಿನ ಅವರು ಕೆಳಗೆ ಬರಲೇಬೇಕು. ಬಿಜೆಪಿಯಲ್ಲೂ ಇದೇ ಆಗುತ್ತದೆ. ಅವರು ಎತ್ತರವನ್ನು ಸಾಧಿಸಿದ್ದಾರೆ, ಆದರೆ ಈಗ ಅವರು ತಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸದಿದ್ದರೆ, ಜನರು ಶೀಘ್ರದಲ್ಲೇ ಅವರನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾರೆ" ಎಂದು ಗೆಹ್ಲೋಟ್ ತಿಳಿಸಿದರು.
ಕರ್ನಾಟಕಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೆಹ್ಲೋಟ್, "ಪ್ರಜಾಪ್ರಭುತ್ವದಲ್ಲಿ ಜನರು ಸರ್ವೋಚ್ಚರಾಗಿದ್ದಾರೆ. ಜನತಾ ಜನಾರ್ಧನನ ತೀರ್ಪು ಏನೇ ಇದ್ದರು ಅದನ್ನು ಸ್ವೀಕರಿಸಲಾಗುವುದು" ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ ಅಶೋಕ್ ಗೆಹ್ಲೋಟ್, "ಬಿಜೆಪಿಯ ವರ್ತನೆಯು ಒಂದು ಸುಳ್ಳು ಉದಾಹರಣೆಯನ್ನು ಪ್ರಸ್ತುತಪಡಿಸುತ್ತಿದೆ. ನೀವು ಅಧಿಕಾರದಲ್ಲಿದ್ದೀರಿ ಮತ್ತು ಚುನಾಯಿತ ಸರ್ಕಾರವನ್ನು ಸಿಂಹಾಸನದಿಂದ ಇಳಿಸಿ ವಾಮ ಮಾರ್ಗದಲ್ಲಿ ಅಧಿಕಾರ ಪಡೆಯಲು ಪ್ರಯತ್ನ ಮಾಡುತ್ತಿದ್ದೀರಿ, ಅದು ತಪ್ಪು" ಎಂದು ತಿಳಿಸಿದರು.
ತೆಲಂಗಾಣ ಮತ್ತು ಗೋವಾದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಸ್ತುತ ಕರ್ನಾಟಕದಲ್ಲಿ ಇದೇ ತಂತ್ರವನ್ನು ಪುನರಾವರ್ತಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಗೆಹ್ಲೋಟ್, ಕಾಂಗ್ರೆಸ್ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರಿಸುವುದರಿಂದ ಬಿಜೆಪಿಗೆ ದೀರ್ಘಾವಧಿಯ ನಷ್ಟವಾಗುತ್ತದೆ ಎಂದು ಭವಿಷ್ಯ ನುಡಿದರು.