ಹೈದರಾಬಾದ್: ಭಾರತದ ಪ್ರಧಾನ ಮಂತ್ರಿ ಆಗಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ ಎಂದು ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಇತರ ಪಕ್ಷಗಳು ಒಪ್ಪಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಪ್ರಧಾನಿಯಾಗಲು ರಾಹುಲ್ ಗಾಂಧಿ ಸೂಕ್ತ ಅಭ್ಯರ್ಥಿ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಆಂಧ್ರಪ್ರದೇಶ ಮುಖ್ಯಮಂತ್ರಿ ಎಂ.ಚಂದ್ರಬಾಬು ನಾಯ್ಡು ಅವರು, ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಎನ್ಡಿಎ ವಿರುದ್ಧ ವಿರೋಧ ಪಕ್ಷಗಳ ಬಲವರ್ಧನೆಗೆ ಶ್ರಮವಹಿಸುತ್ತಿದ್ದಾರೆ ಎಂದು ಮೊಯ್ಲಿ ಶ್ಲಾಘಿಸಿದರು.
ಅಷ್ಟೇ ಅಲ್ಲದೆ, ಛತ್ತೀಸ್ ಘಡ, ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ, ಮಿಜೋರಾಂ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸುಲಭವಾಗಿ ಜಯ ಸಾಧಿಸಲಿದೆ ಎಂದು ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.