ನವದೆಹಲಿ: ಲೋಕಸಭೆ ಚುನಾವಣೆ ಬಳಿಕ ಕೇರಳದ ವಯನಾಡಿಗೆ ಮೂರು ದಿನಗಳ ಭೇಟಿ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಅವರು 49 ವರ್ಷಗಳ ಹಿಂದೆ ತಾವು ಹುಟ್ಟಿದ ಸಂದರ್ಭದಲ್ಲಿ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ರಾಜಮ್ಮ ಅವರನ್ನು ಭಾನುವಾರ ಭೇಟಿ ಮಾಡಿದರು.
As CP @RahulGandhi's third day begins, he shares a light moment with Rajamma, a retired nurse present at the time of his birth.#RahulGandhiWayanad pic.twitter.com/MxvqYJEfRz
— Rahul Gandhi - Wayanad (@RGWayanadOffice) June 9, 2019
ವಯನಾಡಿನ ಮತದಾರರಾಗಿರುವ ನಿವೃತ್ತ ನರ್ಸ್ ರಾಜಮ್ಮ ಅವರು, ಜೂನ್ 19, 1970ರಂದು ರಾಹುಲ್ ಗಾಂಧಿ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜನಿಸಿದ ಸಂದರ್ಭದಲ್ಲಿ ಅದೇ ಆಸ್ಪತ್ರೆಯಲ್ಲಿ ಶುಶ್ರೂಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜೀವ್ ಗಾಂಧಿ-ಸೋನಿಯಾ ಗಾಂಧಿ ದಂಪತಿಗಳ ಗಂಡು ಮಗುವಿನ ಜನನಕ್ಕೆ ರಾಜಮ್ಮ ಸಾಕ್ಷಿಯಾಗಿದ್ದರು. 1987ರಲ್ಲಿ ರಾಜಮ್ಮ ಸೇವೆಯಿಂದ ನಿವೃತ್ತಿ ಪಡೆದ ಬಳಿಕ ಸ್ವರಾಜ್ಯ ಕೇರಳದ ಸುಲ್ತಾನ್ ಬತೇರಿ ಬಳಿಯ ಕಲ್ಲೂರಿನಲ್ಲಿ ವಾಸವಿರುಸಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವದ ಬಗ್ಗೆ ಸೃಷ್ಟಿಯಾಗಿದ್ದ ವಿವಾದದ ಸಂದರ್ಭದಲ್ಲಿ ಮಾತನಾಡಿದ್ದ ರಾಜಮ್ಮ, "ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ರಾಹುಲ್ ಹುಟ್ಟಿದಾಗ ಮಗುವನ್ನು ಮೊದಲು ಎತ್ತಿಕೊಂಡಿದ್ದೇ ನಾನು. ಅಲ್ಲಿ ನಾನಾಗ ನರ್ಸ್ ಆಗಿ ಕೆಲಸ ಮಾಡುತ್ತಿದ್ದೆ. ಆಗಿನ್ನೂ ನನಗೆ 23 ವರ್ಷ ವಯಸ್ಸು. ರಾಹುಲ್ ಹುಟ್ಟಿದ ನಂತರ ಮೊದಲು ಎತ್ತಿಕೊಂಡಿದ್ದೇ ನಾನು. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಮೊಮ್ಮಗನನ್ನು ಎತ್ತಿಕೊಳ್ಳೋಕೆ ನಾವೆಲ್ಲರೂ ಕಾತುರರಾಗಿದ್ದೆವು. ರಾಹುಲ್ ಅಂತೂ ತುಂಬಾ ಮುದ್ದಾಗಿದ್ದ" ಎಂದು ಹೇಳಿದ್ದರು. ಅಲ್ಲದೆ, ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು.
ಅದರಂತೆ, ವಯನಾಡಿನ ಮೂರು ದಿನಗಳ ಭೇಟಿಯ ಕೊನೆಯ ದಿನವಾದ ಭಾನುವಾರದಂದು ರಾಹುಲ್ ಗಾಂಧಿ ಅವರು ನರ್ಸ್ ರಾಜಮ್ಮ ವವಾತಿಲ್ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಿದರು.