ನವದೆಹಲಿ: ಇಲ್ಲಿನ ಆಶ್ರಯ ಗೃಹಗಳಲ್ಲಿ ವಾಸವಿರುವ ಬಾಲಕಿಯರ ಮೇಲೆ ಸಿಬ್ಬಂದಿಯೇ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಮಹಿಳಾ ಆಯೋಗ ಶುಕ್ರವಾರ ತಿಳಿಸಿದೆ.
ದೆಹಲಿಯ ಆಶ್ರಯ ಮನೆಗಳ ಪರಿಶೀಲನೆಗಾಗಿ ತೆರಳಿದ್ದ ಅಧಿಕಾರಿಗಳು ಅಲ್ಲಿನ 6-15ರ ವಯೋಮಾನದ ಬಾಲಕಿಯರೊಂದಿಗೆ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಬಾಲಕಿಯರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ದ್ವಾರಕಾ ಪ್ರದೇಶದಲ್ಲಿರುವ ಆಶ್ರಯ ಮನೆಯಲ್ಲಿ ಹುಡುಗಿಯರ ಮೇಲೆ ಅಮಾನುಷ ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದ್ದು, ಸಿಬ್ಬಂದಿ ಹೇಳಿದ ಕೆಲಸ ಮಾಡದಿದ್ದರೆ ಶಿಕ್ಷೆಯಾಗಿ ಅವರ ಖಾಸಗಿ ಭಾಗಗಳಿಗೆ ಮಹಿಳಾ ಸಿಬ್ಬಂದಿ ಖಾರದ ಪುಡಿ ಹಾಕಿ ಕಿರುಕುಳ ನೀಡುವುದಲ್ಲದೆ, ಒತ್ತಾಯಪೂರ್ವಕವಾಗಿ ಖಾರದ ಪುಡಿ ತಿನ್ನಿಸುತ್ತಾರೆ ಎಂದು ಅಲ್ಲಿ ತಂಗಿರುವ ಕೆಲ ಹುಡುಗಿಯರು ಆರೋಪಿಸಿದ್ದಾರೆ. ಬಾಲಕಿಯರ ಯಾವುದೇ ವಿರೋಧ ಪ್ರತಿಕ್ರಿಯೆಗೆ ಕಠಿಣ ಮತ್ತು ಅಮಾನುಷ ಶಿಕ್ಷೆ ನೀಡಲಾಗುತ್ತಿದೆ ಎಂದು ಆಯೋಗದ ವರದಿ ಉಲ್ಲೇಖಿಸಿದೆ.
ಅಷ್ಟೇ ಅಲ್ಲದೆ, ಸಿಬ್ಬಂದಿಯ ಕೊರತೆಯಿಂದಾಗಿ ಪಾತ್ರೆ, ಬಟ್ಟೆ, ಕೊಠಡಿ-ಶೌಚಾಲಯ, ಅಡುಗೆ ಮನೆಯನ್ನು ಯುವತಿಯರಿಂದಲೇ ಬಲವಂತವಾಗಿ ಸ್ವಚ್ಛಗೊಳಿಸಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ. ಇಡೀ ಆಶ್ರಯ ಮನೆಯಲ್ಲಿ 22 ಬಾಲಕಿಯರು ಮತ್ತು ಸಿಬ್ಬಂದಿಗೆ ಒಬ್ಬರೇ ಅಡುಗೆಯವರಿದ್ದು, ಆಹಾರದ ಗುಣಮಟ್ಟವೂ ಕಳಪೆಯಾಗಿದೆ. ಅಲ್ಲದೆ, ಬೇಸಿಗೆ ಮತ್ತು ಇತರ ರಜೆಗಳಲ್ಲಿ ಬಾಲಕಿಯರು ಮನೆಗೆ ಹೋಗಲು ಅನುಮತಿ ನೀಡುವುದಿಲ್ಲ ಎಂದು ಆಯೋಗ ಹೇಳಿದೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಆಯೋಗದ ಮುಖ್ಯಸ್ಥೆ ಸ್ವಾತಿ ಮಲೈವಾಲ್, ಪೋಲಿಸರನ್ನು ಕರೆಸಿ ಬಾಲಕಿಯರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಅಲ್ಲದೆ, ಈ ಸಂಬಂಧ ಆಶ್ರಯ ಮನೆ ಸಿಬ್ಬಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದು, ವಿಚಾರಣೆ ಮುಂದುವರೆಸಿದ್ದಾರೆ.