ನವದೆಹಲಿ: ಸಾಮಾಜಿಕ ಮಾಧ್ಯಮದ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ದೀಪಕ್ ಗುಪ್ತಾ, 'ನಾನು ಸ್ಮಾರ್ಟ್ಫೋನ್ ಕೈಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ...' ಎಂದಿದ್ದಾರೆ.
ಹೌದು, ಸೋಷಿಯಲ್ ಮೀಡಿಯಾ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಇದು ತುಂಬಾ ಅಪಾಯಕಾರಿ ಎಂದು ನ್ಯಾಯಾಲಯ ಹೇಳಿದೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಎದುರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರ ಈ ವಿಷಯವನ್ನು ಆದ್ಯತೆಯ ಆಧಾರದ ಮೇಲೆ ಪರಿಗಣಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಸೋಷಿಯಲ್ ಮೀಡಿಯಾ ದುರುಪಯೋಗವನ್ನು ತಡೆಯಲು ಕಠಿಣ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಹೇಳಿದರು. ನಮ್ಮ(ವೈಯಕ್ತಿಕ) ಗೌಪ್ಯತೆಯನ್ನು ರಕ್ಷಿಸಬೇಕು. ನಾನು ಸ್ಮಾರ್ಟ್ಫೋನ್ ಬಳಸದಿರುವ ಬಗ್ಗೆ ಯೋಚಿಸುತ್ತಿದ್ದೇನೆ. ನಾವು ಇಂಟರ್ನೆಟ್ ಬಗ್ಗೆ ಏಕೆ ಚಿಂತೆ ಮಾಡುತ್ತೇವೆ? ನಾವು ನಮ್ಮ ದೇಶದ ಬಗ್ಗೆ ಚಿಂತಿಸಬೇಕು ಎಂದು ಅವರು ಹೇಳಿದರು.
ಇದರೊಂದಿಗೆ, ಆನ್ಲೈನ್ ಅಪರಾಧ ಮತ್ತು ಸಾಮಾಜಿಕ ಮಾಧ್ಯಮಗಳನ್ನು ದಾರಿತಪ್ಪಿಸುವ ಜನರನ್ನು ಪತ್ತೆಹಚ್ಚುವುದು ನಮಗೆ ತೀರಾ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಹೇಳಿದರು. ಅದನ್ನು ತಡೆಯುವ ತಂತ್ರಜ್ಞಾನ ನಮ್ಮಲ್ಲಿಲ್ಲ ಎಂದು ಹೇಳುವ ಮೂಲಕ ನಾವು ಅದನ್ನು ಹಾಗೆ ಬಿಡಲು ಸಾಧ್ಯವಿಲ್ಲ. ಅದನ್ನು ತಡೆಯುವ ತಂತ್ರಜ್ಞಾನ ಸರ್ಕಾರದಲ್ಲಿದ್ದರೆ ಅದನ್ನು ಜಾರಿಗೆ ತನ್ನಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನಮ್ಮ ಸರ್ಕಾರ ಬಲಿಷ್ಠವಾಗಿದೆ. ಯಾವುದೇ ರೀತಿಯ ಅಪರಾಧಗಳನ್ನು ತಡೆಗಟ್ಟುವ ಅದ್ಭುತ ತಂತ್ರಜ್ಞಾನ ನಮ್ಮಲ್ಲಿದೆ ಎಂದು ಹೇಳಿರುವ ನ್ಯಾಯಮೂರ್ತಿ ಗುಪ್ತಾ, ಸಾಮಾಜಿಕ ಮಾಧ್ಯಮ ಮತ್ತು ಜಾಲತಾಣಗಳು ದುರುಪಯೋಗವಾಗುವುದನ್ನು ತಡೆಗಟ್ಟಲು ಸೂಕ್ತ ಕಾನೂನು ರಚಿಸುವ ಅಗತ್ಯವಿದೆ. ಸೋಷಿಯಲ್ ಮೀಡಿಯಾ ದುರುಪಯೋಗವನ್ನು ತಡೆಯಲು ಸರ್ಕಾರ ಮಾರ್ಗಸೂಚಿಯನ್ನು ರಚಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಮಂಜಸ ನಿಯಮಗಳನ್ನು ಒಳಗೊಂಡ ಕಾನೂನನ್ನು ಜಾರಿಗೆ ತರಬೇಕು ಎಂದು ಸೂಚಿಸಿದ್ದಾರೆ.