ಠಾಕೂರ್ ನಗರ್(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಠಾಕೂರ್ ನಗರ್ ನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಕೇಳಲು ಭಾರೀ ಜನಸ್ತೋಮವೇ ಹರಿದುಬಂದಿತ್ತು. ಈ ವೇಳೆ ಕಾಲ್ತುಳಿತದ ಮಾದರಿಯ ಪರಿಸ್ಥಿತಿ ಉಂಟಾಗಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಮೊಟಕುಗೊಳಿಸಿದ್ದಾರೆ.
ಉತ್ತರ 24 ಪರಗಾನಸ್ ಜಿಲ್ಲೆಯ ಠಾಕುರ್ನಗರ್ನಲ್ಲಿ ನಡೆದ ರ್ಯಾಲಿಯಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸುವಂತಾಯಿತು. ಕಾಲ್ತುಳಿತ ಪರಿಸ್ಥಿತಿ ನಿರ್ಮಾಣದಿಂದಾಗಿ ಸ್ಥಳದಲ್ಲಿ ಹಲವರು ಗಾಯಗೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡವರಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಹೇಳಿದರು.
ವಾಸ್ತವವಾಗಿ, ಮೋದಿ ಭಾಷಣ ಮಾಡುತ್ತಿದ್ದಂತೆಯೇ ರಾಲಿ ತಾಣದ ಹೊರಗೆ, ಬೇಲಿಯಾಚೆ ನೆರೆದಿದ್ದ ಮಥುವಾ ಸಮುದಾಯದ ಜನರು ಮೈದಾನದ ಒಳನುಗ್ಗಲು ಪ್ರಯತ್ನಿಸಿದರು. ಆಗ ಕಾಲ್ ತುಳಿತದಂತಹ ಸನ್ನಿವೇಶ ಏರ್ಪಟ್ಟಿತು. ಇದರಿಂದಾಗಿ ಸ್ಥಳದಲ್ಲಿ ಪ್ಯಾನಿಕ್-ರೀತಿಯ ಪರಿಸ್ಥಿತಿ ಉಂಟಾಯಿತು.
ಆ ವೇಳೆ ಪ್ರಧಾನಿ ಮೋದಿ ಅವರು ಸಾರ್ವಜನಿಕರಿಗೆ ತಾವು ನಿಂತಿರುವ ಸ್ಥಳದಲ್ಲೇ ನಿಲ್ಲಿ, ಮುಂದೆ ಬರಲು ಪ್ರಯತ್ನಿಸಬೇಡಿ ಎಂದು ಸಾಕಷ್ಟು ಮನವಿ ಮಾಡಿದರು. ಆದರೆ ಅವರ ಮನವಿ ಯಾವುದೇ ಪರಿಣಾಮ ಬೀರಲಿಲ್ಲ. ಹಲವರು ವೇದಿಕೆಯ ಮುಂದೆ ಕುರ್ಚಿಗಳನ್ನು ಎಸೆಯಲು ಪ್ರಾರಂಭಿಸಿದರು. ಇದರಿಂದಾಗಿ ಖಾಲಿಯಾಗುವ ಜಾಗಕ್ಕೆ ತಾವು ಮುನ್ನುಗ್ಗಬಹುದೆಂದು ಅವರು ಯೋಚಿಸಿದ್ದರು. ಆ ಸ್ಥಳವು ಮಹಿಳೆಯರಿಗಾಗಿ ನಿಗದಿಯಾಗಿತ್ತು. ಶಾಂತಿ- ಶಿಷ್ಟಾಚಾರ ಪಾಲಿಸುವಂತೆ ಭಾಷಣದ ನಡುವೆ ಪ್ರಧಾನಿ ಮೋದಿ ಮನವಿ ಮಾಡಿದರೂ ಸಹ ಕಾಲ್ತುಳಿತದ ಪರಿಸ್ಥಿತಿಯ ಭೀತಿ ಕಡಿಮೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಕೆಲವೇ ನಿಮಿಷಗಳಿಗೆ ಸೀಮಿತಗೊಳಿಸಿದರು.