ನವದೆಹಲಿ: ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಕಲಿ ಮದ್ಯ ಕುಡಿದು ಮೂವರು ಸಾವನ್ನಪ್ಪಿದ್ದು, 29 ಮಂದಿ ಅಸ್ವಸ್ಥರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕಾಗಿ ರಾಜಕೀಯ ನಾಯಕರು ಮತ ಹಾಕಲು ನೀಡಿದ್ದ ಹಣದಿಂದ ಮದ್ಯ ಖರೀದಿಸಿ ಕುಡಿದಿದ್ದರು ಎಂಬ ಆರೋಪ ಕೇಳಿ ಬಂದಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಉಮಾಕಾಂತ್ ಹೇಳಿದ್ದಾರೆ.
ಭದ್ರಾಕ್ ಜಿಲ್ಲೆಯ ತಿಹಿಡೀ ಪೊಲೀಸ್ ಠಾಣಾ ವ್ಯಾಪ್ತಿಯ ದೌಲತಪುರ ಗ್ರಾಮದ ಜನರು ಮತದಾನದ ಬಳಿಕ ಸ್ಥಳೀಯ ಮಾರುಕಟ್ಟೆಯಿಂದ ಮದ್ಯ ಖರೀದಿಸಿ ತಂದಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಉಮಾಕಾಂತ್ ಹೇಳಿದ್ದಾರೆ.
ಅಲ್ಲದೆ, ಘಟನೆಯಲ್ಲಿ ಅಸ್ವಸ್ಥರಾದ 29 ಮಂದಿಯನ್ನು ಎಸ್ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತರನ್ನು ಸುಧಾ ಚರಣ್ ನಾಯಕ್, ಸರಬೇಸವಾ ದಾಸ್, ರಾಮಚಂದ್ರ ದಾಸ್ ಎಂದು ಗುರುತಿಸಲಾಗಿದೆ.