ನವದೆಹಲಿ: ಇಸ್ರೋ(ISRO)ದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ್-2 ಸೆಪ್ಟೆಂಬರ್ 7 ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ವೇಳೆ ಪತನಗೊಂಡಿತ್ತು. ಇದೀಗ ಅದರ ಅವಶೇಷಗಳನ್ನು ನಾಸಾ(NASA) ಪತ್ತೆಹಚ್ಚಿದ್ದು, ಅದರ ಕೀರ್ತಿಯನ್ನು ಚೆನ್ನೈ ಮೂಲದ ಯುವ ಇಂಜಿನಿಯರ್ ಷಣ್ಮುಗ ಸುಬ್ರಮಣಿಯನ್ ಅವರಿಗೆ ನೀಡಿದೆ.
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟೋಕ್ತಿ ಹಂಚಿಕೊಂಡಿರುವ ಷಣ್ಮುಗ, 'ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಸಾಧನೆಯನ್ನು ನಾಸಾ ನನಗೆ ನೀಡಿದೆ' ಎಂದಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈಲ್ ನಲ್ಲಿ "ನಾನು ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದೆ" ಎಂದು ಬರೆದುಕೊಂಡಿರುವ ಅವರು, ಈ ಕಾರ್ಯಕ್ಕಾಗಿ ತಾವು ಸಾಕಷ್ಟು ಶ್ರಮವಹಿಸಿರುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೊಂಡಿದ್ದಾರೆ.
#WATCH "I was able to find something out of the ordinary in a particular spot,so,I thought this must be the debris;This should inspire lot of people,"S Subramanian,an amateur astronomer from Chennai who has discovered debris of Chandrayaan-2's Vikram Lander on surface of the moon pic.twitter.com/BuLeQzKIkP
— ANI (@ANI) December 3, 2019
ಕಳೆದ ಸೆಪ್ಟೆಂಬರ್ 26ರಂದು ವಿಕ್ರಮ್ ಲ್ಯಾಂಡರ್ ಪತನಕ್ಕೆ ಸಂಬಂಧಿಸಿದ ಚಿತ್ರಗಳನ್ನು ನಾಸಾ ಬಿಡುಗಡೆಗೊಳಿಸಿತ್ತು ಹಾಗೂ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಆಗಬೇಕಿದ್ದ ಸ್ಥಳದ ಮೊದಲ ಚಿತ್ರದ ಜೊತೆ ಅವುಗಳ ಹೋಲಿಕೆ ಮಾಡಿ ಲ್ಯಾಂಡರ್ ಗುರುತು ಪತ್ತೆ ಮಾಡುವಂತೆ ಜನರನ್ನು ಆಹ್ವಾನಿಸಿತ್ತು. ಈ ಚಿತ್ರಗಳನ್ನು ತಮ್ಮದೇ ಶೈಲಿಯಲ್ಲಿ ಹೋಲಿಕೆ ಮಾಡಿರುವ ಷಣ್ಮುಗ, ಅಕ್ಟೋಬರ್ 3ರಂದು ಲ್ಯಾಂಡರ್ ಅವಶೇಷಗಳ ಕುರಿತು ಎರಡು ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹರಿಬಿಟ್ಟು ಇದು ಲ್ಯಾಂಡರ್ ಇರಬಹುದೇ? ಮತ್ತು ಚಂದ್ರನ ಅಂಗಳದಲ್ಲಿರುವ ಮರಳಿನ ರಾಶಿಯಲ್ಲಿ ಇದು ಮುಚ್ಚಿಹೋಗಿದೆಯೇ? ಎಂದು ಬರೆದುಕೊಂಡಿದ್ದರು.
ಈ ಕುರಿತು ಎರಡು ತಿಂಗಳುಗಳ ಸುದೀರ್ಘ ಪರಾಮರ್ಶೆ ನಡೆಸಿರುವ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ(NASA) ವಿಕ್ರಮ್ ಲ್ಯಾಂಡರ್ ಅವಶೇಷಗಳನ್ನು ಪತ್ತೆಹಚ್ಚಿದೆ. ಜೊತೆಗೆ ಅದರ ಶ್ರೇಯವನ್ನು ಭಾರತೀಯ ಮೂಲದ ಇಂಜಿನಿಯರ್ ಷಣ್ಮುಗ ಸುಬ್ರಮಣಿಯನ್ ಅವರಿಗೆ ನೀಡಿ, ಲ್ಯಾಂಡರ್ ಅಸ್ತಿತ್ವ ಪತ್ತೆಹಚ್ಚಿದ ಮೊದಲಿಗರು ಎಂದು ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಟ್ವೀಟ್ ಮಾಡಿರುವ ನಾಸಾ ತನ್ನ ಚಂದ್ರ ವಿಚಕ್ಷಕ ಆರ್ಬಿಟರ್(LRO) ಉಪಗ್ರಹ ಸೆರೆಹಿಡಿದಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಅವಶೇಷಗಳನ್ನು ಕಾಣಬಹುದಾಗಿದೆ ಎಂದು ಹೇಳಿತ್ತು. ಲ್ಯಾಂಡರ್ ಪ್ರಭಾವದ ಸ್ಥಳ ಮತ್ತು ಅನುಕ್ರಮವಾಗಿ ನೀಲಿ ಮತ್ತು ಹಸಿರು ಚುಕ್ಕೆಗಳೊಂದಿಗೆ ವಿಕ್ರಮ್ ಲ್ಯಾಂಡರ್ ಇಳಿದಿರುವಾಗ ರಚಿತವಾದ ಸಂಬಂಧಿತ ಶಿಲಾಖಂಡರಾಶಿಗಳ ಕ್ಷೇತ್ರವನ್ನೂ ಇದು ತೋರಿಸಿದೆ.