ನವದೆಹಲಿ: ಬುಧವಾರ(ಅಕ್ಟೋಬರ್ 16)ದಂದು ದೆಹಲಿ ನ್ಯಾಯಾಲಯದಲ್ಲಿ ವಿಚಿತ್ರ ಪ್ರಕರಣವೊಂದದಲ್ಲಿ 13 ಗಿಳಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಇದೇನು ಗಿಳಿಗಳು ಅಪರಾಧ ಮಾಡಿವೆಯೇ? ಅವುಗಳನ್ನು ನ್ಯಾಯಾಲಯಕ್ಕೆ ಏಕೆ ಕರೆದೊಯ್ದರು ಎಂದು ನಿಮಗೆ ಆಶ್ಚರ್ಯವಾಗಬಹುದು...
ಉಜ್ಬೆಕ್ ರಾಷ್ಟ್ರೀಯ ಅನ್ವರ್ಜೋನ್ ರಾಖಮತ್ಜೊನೊವ್ ಅವರನ್ನು ಸಿಐಎಸ್ಎಫ್ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ ದೇಶದಿಂದ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಗಿಳಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಾಸ್ತವವಾಗಿ ಜೀವಂತ ಗಿಳಿಗಳನ್ನು ವಿವಿಧ ಶೂ ಪೆಟ್ಟಿಗೆಗಳಿಂದ ವಶಪಡಿಸಿಕೊಳ್ಳಲಾಗಿದೆ.
"ವನ್ಯಜೀವಿ ಕಾಯ್ದೆಯ ಪ್ರಕಾರ ಗಿಳಿಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಗಿಳಿಗಳನ್ನು ಭಾರತದಿಂದ ಕಳ್ಳ ಸಾಗಾಣೆ ಮಾಡಲು ಯತ್ನಿಸುತ್ತಿದ್ದ ಆರೋಪಿಗಳ ವಿರುದ್ಧ ಕಸ್ಟಮ್ಸ್ ಪ್ರಕರಣ ದಾಖಲಿಸಲಾಗಿದೆ".
"ಕಾನೂನಿನ ಪ್ರಕಾರ, ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಗಿಳಿಗಳು ಜೀವಂತ ಪಕ್ಷಿಗಳಾಗಿರುವುದರಿಂದ ಅವುಗಳನ್ನು ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸುವುದಕ್ಕಾಗಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು" ಎಂದು ಕಸ್ಟಮ್ಸ್ನ ವಕೀಲ ಪಿಸಿ ಶರ್ಮಾ ಹೇಳಿದರು.
ಇನ್ನು ಇದೇ ವೇಳೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿತು. ಜೊತೆಗೆ ಅವರನ್ನು ಅಕ್ಟೋಬರ್ 30 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ನ್ಯಾಯಾಲಯ ಆದೇಶಿಸಿದೆ.
ಎಲ್ಲಾ ಗಿಳಿಗಳನ್ನು ಓಖ್ಲಾ ಪಕ್ಷಿಗಳ ಅಭಯಾರಣ್ಯಕ್ಕೆ ಕಳುಹಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ವಿಚಾರಣೆಯ ವೇಳೆ ಆರೋಪಿ ಸಿಐಎಸ್‌ಎಫ್‌ಗೆ ಓಲ್ಡ್ ದೆಹಲಿಯ ಮಾರಾಟಗಾರರಿಂದ ಈ ಗಿಳಿಗಳನ್ನು ಖರೀದಿಸಿರುವುದಾಗಿ ತಿಳಿಸಿದ್ದಾನೆ. ಉಜ್ಬೇಕಿಸ್ತಾನ್‌ನಲ್ಲಿ ಹೆಚ್ಚಿನ ಬೇಡಿಕೆಯಿರುವುದರಿಂದ ಗಿಳಿಗಳನ್ನೂ ದೇಶದಿಂದ ಕಳ್ಳಸಾಗಣೆ ಮಾಡುತ್ತಿರುವುದಾಗಿ ಅವರು ಬಹಿರಂಗಪಡಿಸಿದರು.
(Input: ANI)