ಬೆಂಗಳೂರು : ಕಾಂಗ್ರೆಸ್ ಎರಡನೇ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇನ್ನೂ ಒಮ್ಮತ ಮೂಡಿಲ್ಲ. ಈ ನಡುವೆ ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಶನಿವಾರ ಡಿ ಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಆದರೆ ಅಧಿಕೃತವಾಗಿ ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಾರದೆ ಇದ್ದರೂ, ಸದ್ಯ ಟಿಕೆಟ್ ವಿಚಾರವಾಗಿ ನಡೆಯುತ್ತಿರುವ ಆಂತರಿಕ ತಿಕ್ಕಾಟದ ಹಿನ್ನೆಲೆಯ ನಡುವೆ ಈ ಭೇಟಿ ಸಹಜವಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಎಐಸಿಸಿ ಅಧ್ಯಕ್ಷರಾದ ಮಾನ್ಯ ಶ್ರೀ @Kharge ಅವರನ್ನು ಅವರ ನಿವಾಸದಲ್ಲಿ ಇಂದು ಭೇಟಿ ಮಾಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಲಾಯಿತು. pic.twitter.com/MExhyQfTvJ
— DK Shivakumar (@DKShivakumar) April 1, 2023
ಇದನ್ನೂ ಓದಿ- Health Tips: ಈ ಬೇಸಿಗೆಯಲ್ಲಿ ಮಾವಿನ ಹಣ್ಣು ಸೇವಿಸಿ ಆರೋಗ್ಯವಂತರಾಗಿರಿ
ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಇದೀಗ ಉಳಿದ 100 ಕ್ಷೇತ್ರಗಳ ಹೆಸರುಗಳನ್ನು ಅಂತಿಮಗೊಳಿಸಬೇಕಾಗಿದೆ. ಈ ನಡುವೆ ಸುಮಾರು 35 ಕ್ಷೇತ್ರಗಳಿಗೆ ಓರ್ವ ಅಭ್ಯರ್ಥಿಯ ಹೆಸರು ಫೈನಲ್ ಆಗಿದೆ. ಉಳಿದ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಾಕಷ್ಟು ಜಟಿಲಗೊಂಡಿದೆ.
ಅದರಲ್ಲೂ ಪುತ್ತೂರು, ಮಂಗಳೂರು ಉತ್ತರ, ಕಲಘಟಗಿ, ತೀರ್ಥಹಳ್ಳಿ, ದಾಸರಹಳ್ಳಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಜಟಿಲಗೊಂಡಿದೆ. ಪುತ್ತೂರಿನಲ್ಲಿ ಡಿಕೆಶಿ ಬೆಂಬಲಿತರ ಅಶೋಕ್ ರೈಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ಮಂಗಳೂರು ಉತ್ತರದಲ್ಲೂ ಮೊಯ್ದಿನ್ ಭಾವಾ ಹಾಗೂ ಇನಾಯತ್ ಅಲಿ ನಡುವೆ ಪೈಪೋಟಿ ಇದೆ.
ಇದನ್ನೂ ಓದಿ- ಚಹಾದೊಂದಿಗೆ ಈ ಆಹಾರಗಳ ಸೇವನೆ ತುಂಬಾ ಅಪಾಯಕಾರಿ
ಇನ್ನು ನರಗುಂದಲ್ಲಿ ಕೋನರೆಡ್ಡಿ ಹಾಗೂ ವಿನೋದ್ ಅಸೂಟಿ. ಕಲಘಟಗಿಯಲ್ಲಿ ಸಂತೋಷ್ ಲಾಡ್ ಹಾಗೂ ನಾಗರಾಜ್ ಛಬ್ಬಿ, ಹಾಗೂ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ ಮತ್ತು ಮಂಜುನಾಥ್ ಗೌಡ ನಡುವೆ ಪೈಪೋಟಿ ಇದೆ. ಕೆಲವು ಅಭ್ಯರ್ಥಿಗಳಿಗೆ ಡಿಕೆಶಿ ಬೆಂಬಲ ನೀಡಿದರೆ ಮತ್ತೆ ಕೆಲವರಿಗೆ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ. ಪರಿಣಾಮ ಈ ಕ್ಷೇತ್ರಗಳ ಬಗ್ಗೆ ಒಂದು ನಿರ್ಧಾರವನ್ನು ಕೈಗೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ.
ಡಿಕೆಶಿ ಹಾಗೂ ಸಿದ್ದು ನಡುವೆ ಒಮ್ಮತ ಮೂಡಿಸುವಲ್ಲಿ ಸುರ್ಜೇವಾಲ ಸುಸ್ತು
ಎರಡನೇ ಪಟ್ಟಿ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಒಮ್ಮತ ಮೂಡಿಸುವಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸುಸ್ತಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಮದ್ಯರಾತ್ರಿವರೆಗೂ ಚರ್ಚೆ ನಡೆಸಿದರೂ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.35 ಕ್ಷೇತ್ರಗಳಿಗೆ ಓರ್ವ ಅಭ್ಯರ್ಥಿ ಹೆಸರು ಫೈನಲ್ ಮಾಡಿದರೂ, ಉಳಿದ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಉಳಿದಿದೆ.
ಸುರ್ಜೆವಾಲಾ ಸಿದ್ದರಾಮಯ್ಯ ಪ್ರತ್ಯೇಕ ಮಾತುಕತೆ
ಕೋಲಾರಕ್ಕೆ ತೆರಳುವ ವೇಳೆ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ಮಾತುಕತೆ ನಡೆಸಿದರು. ಪ್ರತ್ಯೇಕವಾಗಿ ಮಾತುಕತೆ ನಡೆಸಲು ಒಂದೇ ಕಾರಿನಲ್ಲಿ ಸುರ್ಜೆವಾಲಾ ಹಾಗೂ ಸಿದ್ದರಾಮಯ್ಯ ತೆರಳಿದರು. ಬೇರೆ ನಾಯಕರನ್ನು ಬಿಟ್ಟು ಪ್ರತ್ಯೇಕವಾಗಿ ಒಂದು ಕಾರಿನಲ್ಲಿ ಸಿದ್ದರಾಮಯ್ಯ ಹಾಗೂ ಸುರ್ಜೆವಾಲಾ ತೆರಳಿದರು.