ಅದು 1942, ದೇಶದೆಲ್ಲೆಡೆ ಕ್ವಿಟ್ ಇಂಡಿಯಾ ಚಳುವಳಿ ತೀವ್ರಗೊಂಡಿತ್ತು,ಇಂತಹ ಸಂದರ್ಭದಲ್ಲಿ ಗಾಂಧೀಜಿ, ಅರವಿಂದರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಬಸವಕುಮಾರರು ಇಂದಿನ ಗದಗ ಜಿಲ್ಲೆಯಲ್ಲಿರುವ ತಮ್ಮ ಶಿಗ್ಲಿ ಗ್ರಾಮವನ್ನೇ ತಮ್ಮ ಕೇಂದ್ರವನ್ನಾಗಿಟ್ಟುಕೊಂಡು ಸ್ವಾತಂತ್ರ ಹೋರಾಟಕ್ಕೆ ಧುಮುಕಿದವರು.
ಗಾಂಧೀಜಿ, ಆಚಾರ್ಯ ವಿನೋಭಾ ಭಾವೆ, ಪಂಡಿತ್ ನೆಹರು ರಂತಹ ಘಟಾನುಘಟಿಗಳ ಜೊತೆ ಪತ್ರ ವ್ಯವಹಾರದ ನಂಟನ್ನು ಇಟ್ಟುಕೊಂಡಿದ್ದ ಬಸವಕುಮಾರರು ಅವಿಭಜಿತ ಧಾರವಾಡ ಜಿಲ್ಲೆಯ ಭಾಗದಲ್ಲಿನ ಮೈಲಾರ ಮಹಾದೇವಪ್ಪ, ಹಳ್ಳಿಕೇರಿ ಗುದ್ಲೆಪ್ಪರಂತಹ ಹೋರಾಟಗಾರರ ಜೊತೆಗೂಡಿ ಚಳುವಳಿಯ ರೂಪುರೇಷೆಗಳನ್ನು ಈ ಭಾಗದಲ್ಲಿ ಸಿದ್ದಪಡಿಸುತ್ತಿದ್ದರು.
ಇಂತಹ ಬಸವಕುಮಾರರು ಸ್ವಾತಂತ್ರ ಸಿಕ್ಕ ನಂತರ ರಾಜಕೀಯದಿಂದ ವಿಮುಖರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದು ಅವರ ಬಯಕೆಯಾಗಿತ್ತು, ಹೀಗಾಗಿ ಅವರು ಎಂದಿನಂತೆ ರಾಷ್ಟ್ರೀಯ ನಾಯಕರಿಗೆ ನೇರವಾಗಿ ಪತ್ರವನ್ನು ಬರೆಯುವ ಮೂಲಕ ತಮ್ಮ ಗೊಂದಲಗಳನ್ನು ನಿವಾರಿಸಿಕೊಳ್ಳುತ್ತಿದ್ದರು.
ಸ್ವಾತಂತ್ರ ಸಿಕ್ಕು ಇನ್ನೂ ಆರು ತಿಂಗಳು ಆಗಿರಲಿಲ್ಲ,ಆದಾಗಲೇ ಬಸವಕುಮಾರರಿಗೆ ಇನ್ನೂ ಮುಂದೇನು ಎನ್ನುವ ಪ್ರಶ್ನೆ ಕಾಡತೊಡಗಿತು,ಅಪ್ಪಟ ಗಾಂಧಿವಾದಿಯಾಗಿದ್ದ ಅವರು ಶಿಕ್ಷಣ, ಸಾಕ್ಷರತೆ, ಅಸ್ಪೃಶ್ಯತೆಯ ನಿವಾರಣೆ, ಗ್ರಾಮೋದ್ಯೋಗ ಇಂತಹ ಹಲವು ಯೋಜನೆಗಳನ್ನು ಉಲ್ಲೇಖಿಸಿ ಜನವರಿ 11, 1948 ರಂದು ಮಹಾತ್ಮಾ ಗಾಂಧೀಜಿ ಅವರಿಗೆ ಪತ್ರ ಬರೆದು' ನನ್ನ ಜೀವನವನ್ನು ಸಮಾಜಸೇವೆಗೆ ಮೀಸಲಿಡಲು ತಿರ್ಮಾನಿಸಿದ್ದೇನೆ. ನಿಮ್ಮ ಆಶೀರ್ವಾದದಿಂದಲೇ ಈ ಸಮಾಜ ಸೇವೆ ಕೈಗೊಳ್ಳಬೇಕೆಂದು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದರು.
Mahatma Gandhi's letter to Shigli Basavakumar on January 18, 1948, was one of the last letters Gandhi wrote before his assassination on January 30, 1948.#MahatmaGandhi#GandhiJayanti2024 #Shigli pic.twitter.com/KWFq2GAPIb
— Gadag Heritage (@GadagHeritage) October 2, 2024
ಇದಕ್ಕೆ ಉತ್ತರವಾಗಿ ಪತ್ರ ಬರೆದ ಮಹಾತ್ಮ ಗಾಂಧೀಜಿಯವರು "ಸಚ್ಚಿ ಸೇವಾ ಕರನಾ ಚಾಹಿಯೇ ಸೇವಾ ಸಚ್ಚಿ ಹೈತೋ ವಹಿ ಆಶೀರ್ವಾದ ಬನ್ ಜಾತಾ ಹೈ ಬಸ್" ಅಂತಾ ಉತ್ತರ ಬರೆದರು.ಆದರೆ ಈ ಪತ್ರ ದಿಲ್ಲಿಯಿಂದ ಇನ್ನೂ ಗದುಗಿನ ಶಿಗ್ಲಿ ಗ್ರಾಮಕ್ಕೆ ತಲುಪಿರಲಿಲ್ಲ, ಅದು ಗ್ರಾಮಕ್ಕೆ ತಲುಪುವಷ್ಟರಲ್ಲಿ ಜನವರಿ 30 ರಂದು ಮಹಾತ್ಮಾ ಗಾಂಧಿ ಅವರ ಕಗ್ಗೊಲೆಯಾಯಿತು. ಇದಾದ ಎರಡು ಮೂರು ದಿನಗಳ ನಂತರ ಗ್ರಾಮಕ್ಕೆ ಗಾಂಧೀಜಿ ಅವರ ಪತ್ರ ತಲುಪಿತು.
ಅವರಿಗೆ ಗಾಂಧೀಜಿ ಪತ್ರದ ಮೂಲಕ ಸಿಕ್ಕ ಆಶೀರ್ವಾದ ಒಂದೆಡೆಯಾದರೆ ಇನ್ನೊಂದೆಡೆಗೆ ಗಾಂಧೀಜಿ ಅವರ ಕಗ್ಗೊಲೆಯಾಗಿದ್ದು ಬಹುವಾಗಿ ಕಾಡಿತು.ಆದಾಗ್ಯೂ ಗಾಂಧೀಜಿವರ ಸಲಹೆಯನ್ನೇ ಆಶೀರ್ವಾದವೆಂದು ಅವರು ಭಾವಿಸಿ ಮುಂದೆ ಫೆಬ್ರುವರಿ 12, 1948 ರಲ್ಲಿ ಶಿಗ್ಲಿ ಗ್ರಾಮದಲ್ಲಿ ಸೇವಾಮಂದಿರವನ್ನು ಸ್ಥಾಪಿಸಿದರು, ಸ್ವಾತಂತ್ರ ಹೋರಾಟದಲ್ಲಿ ಹೋರಾಟಗಾರರ ನೆಲೆಯಾಗಿದ್ದ ವೀರಪ್ಪಜ್ಜನ ತಪೋಭೂಮಿಯಲ್ಲಿ ಅವರು ಸೇವಾಮಂದಿರದ ಕಾರ್ಯಗಳನ್ನು ಆರಂಭಿಸಿದರು.
ರಾಜಕೀಯದಿಂದ ವಿಮುಖವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಬಯಕೆಯಿಂದಲೇ ಸೇವಾಮಂದಿರ ಸ್ಥಾಪಿಸಿದ್ದ ಬಸವಕುಮಾರರು 1952 ದೇಶದ ಮೊದಲ ಸಾರ್ವತ್ರಿಕ ಚುನಾವಣೆಯ ಘೋಷಣೆಯಾಯಿತು.ಹೀಗಾಗಿ ಬಹುತೇಕರು ಅವರಿಗೆ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿಕೊಳ್ಳಲಾಯಿತು. ಇಂತಹ ಸಂದರ್ಭದಲ್ಲಿ ಆಚಾರ್ಯ ವಿನೋಭಾ ಭಾವೆ ಅವರ ಸರ್ವೋದಯ ಚಳುವಳಿಯಿಂದ ಪ್ರೇರಿತರಾಗಿದ್ದ ಅವರು ನೇರವಾಗಿ ಅವರಿಗೆ ಪತ್ರ ಬರೆದು ಸಲಹೆ ನೀಡಲು ವಿನಂತಿಸಿಕೊಂಡರು.ಇದಕ್ಕೆ ವಿನೊಭಾ ಅವರು ಉತ್ತರಿಸುತ್ತಾ ಚುನಾವಣೆ ಸಮಯದಲ್ಲಿ ಪಕ್ಷ ತೊರೆಯುವುದು ಸರಿಯಲ್ಲ,ಒಂದು ವೇಳೆ ರಾಜಕೀಯ ಬೇಡ ಎನಿಸಿದರೆ ಚುನಾವಣೆ ಮುಗಿದ ನಂತರ ರಾಜೀನಾಮೆ ನೀಡು ಎಂದು ಹೇಳಿದರು.
ಜೀವನದುದ್ದಕ್ಕೂ ಮೌಲ್ಯಯುತ ರಾಜಕಾರಣಕ್ಕೆ ಬೆಲೆ ನೀಡಿದ್ದ ಬಸವಕುಮಾರರು ಮುಂದೆ ಸಾರ್ವತ್ರಿಕ ಚುನಾವಣೆಯ ನಂತರ ಸಕ್ರೀಯ ರಾಜಕಾರಣಕ್ಕೆ ವಿದಾಯ ಹೇಳಿದರು. ಅಷ್ಟೇ ಅಲ್ಲದೆ ಸರ್ವೋದಯ ಚಳುವಳಿ ತಮ್ಮನ್ನು ತೊಡಗಿಸಿಕೊಂಡು 1957 ರಲ್ಲಿ ಗದುಗಿನ ಶಿಗ್ಲಿ ಗ್ರಾಮಕ್ಕೆ ಭೂದಾಯ ಚಳುವಳಿಯ ಹರಿಕಾರರಾದ ವಿನೋಭಾ ಭಾವೆಯನ್ನು ಕರೆ ತರುವಲ್ಲಿ ಯಶಸ್ವಿಯಾಗಿದ್ದರು.
-ಮಂಜುನಾಥ ನರಗುಂದ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.