ಬೆಂಗಳೂರು: ಕೊಳಚೆ ನೀರು, ಕಳೆ ಸಸ್ಯಗಳು ಮತ್ತು ಕಟ್ಟಡ ತ್ಯಾಜ್ಯದಿಂದಾಗಿ ಅಳಿವಿನ ಅಂಚಿಗೆ ತಲುಪಿದ್ದ ಕೆರೆಗಳಿಗೆ ಬಿಬಿಎಂಪಿ ಕಾಯಕಲ್ಪ ನೀಡುತ್ತಿದೆ. ಮತ್ತೊಂದೆಡೆ ಅತಿಕ್ರಮಣ ತೆರವಿಗೂ ತಯಾರಿ ಮಾಡಿಕೊಳ್ಳುತ್ತಿದ್ದು, ಆ ಮೂಲಕ ಜಲಮೂಲಗಳ ಸಂರಕ್ಷಣೆಗೆ ಮುಂದಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದ್ದ 28, ಅರಣ್ಯ ಇಲಾಖೆಯ 9 ಮತ್ತು ಬಿಎಂಆರ್‌ಸಿಎಲ್ ಕೆಂಗೇರಿ ಕೆರೆಯನ್ನು ಪಾಲಿಕೆಯ ಸುಪರ್ದಿಗೆ ಹಸ್ತಾಂತರಿಸಲಾಗಿದೆ. ಹೀಗೆ ಒಟ್ಟು ಪಾಲಿಕೆ ಒಡೆತನದಲ್ಲಿ 220 ಕೆರೆಗಳಿದ್ದು, ಇದರಲ್ಲಿ 19 ಕೆರೆಗಳು ಅಸ್ತಿತ್ವ ಕಳೆದುಕೊಂಡಿವೆ ಎಂದು ಪಾಲಿಕೆ ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ. ನಾಪತ್ತೆ ಆಗಿರುವ ಈ ಕೆರೆಗಳ ಜಾಗದಲ್ಲಿ ಬಿಡಿಎ ನಿರ್ಮಿತ ಬಡಾವಣೆಗಳು, ಖಾಸಗಿ ಲೇಔಟ್‌ಗಳು, ಶಾಲೆ, ದೇವಾಲಯ, ಬಸ್ ನಿಲ್ದಾಣ, ಡಿಪೊಗಳು ತಲೆ ಎತ್ತಿವೆ ಎಂದು ಮಾಹಿತಿ ಹೊರಹಾಕಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೊಸ 'ಹೋಪ್'..! ಇದು ಸ್ನೂಕರ್ ಪಟು ಚೊಚ್ಚಲ ಕನಸು..!
ಕಳೆದ ಕೆಲ ವರ್ಷಗಳಿಂದೀಚೆಗೆ ಪಾಲಿಕೆ ಸುಪರ್ದಿಯಲ್ಲಿದ್ದ 393.31 ಎಕರೆ ವಿಸ್ತೀರ್ಣದ 19 ಕೆರೆಗಳು ಕಣ್ಮರೆಯಾಗಿವೆ. ಅಲ್ಲೀಗ ಕೆರೆ ಇತ್ತೆಂಬುದಕ್ಕೆ ಸಣ್ಣ ಕುರುಹು ಸಹ ಕಾಣಸಿಗುವುದಿಲ್ಲ. 20.10 ಎಕರೆ ವಿಸ್ತೀರ್ಣ ಹೊಂದಿದ್ದ ವಿಜಿನಾಪುರ ಕೆರೆಯಲ್ಲಿ ಖಾಸಗಿ ಕಟ್ಟಡಗಳು, ಶಾಲೆ, ದೇವಾಲಯಗಳು ನಿರ್ಮಾಣಗೊಂಡಿವೆ. ಬಿಳೇಕಹಳ್ಳಿ, ಬ್ಯಾಗುಂಟೆಪಾಳ್ಯ, ಲಿಂಗರಾಜಪುರ, ಗೆದ್ದಲಹಳ್ಳಿ, ಅಗ್ರಹಾರ ದಾಸರಹಳ್ಳಿ ಕೆರೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಕಬಳಿಸಿ ಬಡಾವಣೆಗಳನ್ನು ನಿರ್ಮಿಸಿದೆ. ಹೀಗಾಗಿ, ಈ ಕೆರೆಗಳು ಮೂಲ ಅಸ್ತಿತ್ವವನ್ನೇ ಕಳೆದುಕೊಂಡಿವೆ.
ನಗರದ 79 ಕೆರೆಗಳ ಸಮಗ್ರ ಅಭಿವೃದ್ಧಿ;
ಪಾಲಿಕೆಯು ಕೋಟ್ಯಂತರ ರೂ ಖರ್ಚು ಮಾಡಿ 79 ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದು, ಅವುಗಳ ಚಹರೆಯನ್ನೇ ಬದಲಿಸಲಾಗಿದೆ. ಕೆರೆಗಳಲ್ಲಿ ಹೂಳು ತೆರವುಗೊಳಿಸಿ, ನೀರಿನ ಸಂಗ್ರಹ ಸಾಮರ್ಥ್ಯವನ್ನು ಜಾಸ್ತಿ ಮಾಡಲಾಗಿದೆ. ಒಳ ಮತ್ತು ಹೊರ ಹರಿವಿನ ಕಾಲುವೆಗಳು, ಏರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಕೆರೆ ಸುತ್ತಲೂ ವಾಯುವಿಹಾರ ಪಥವನ್ನು ನಿರ್ಮಿಸಿ, ತಂತಿಬೇಲಿ ಅಳವಡಿಸಲಾಗಿದೆ. ಇದರಿಂದ ಅಕ್ರಮವಾಗಿ ಕಸ ಸುರಿಯುವುದು ತಪ್ಪಿದೆ ಎಂದು ಪಾಲಿಕೆ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
200 ಕೋಟಿ ರೂ ಅನುದಾನ ನೀಡುತ್ತಿರುವ ಸರ್ಕಾರ;
ರಾಜ್ಯ ಸರಕಾರವು 2019-20 ಮತ್ತು 20-21ನೇ ಸಾಲಿಗೆ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ 21 ಕೆರೆಗಳ ಅಭಿವೃದ್ಧಿಗೆ 200 ಕೋಟಿ ರೂ ಅನುದಾನ ಒದಗಿಸಲಾಗಿದ್ದು,ಅದರಡಿ ಅಭಿವೃದ್ಧಿ ಕಾರ್ಯ ಚಾಲನೆಯಲ್ಲಿದೆ ಎಂದು ಪಾಲಿಕೆ ವಿಶೇಷ ಆಯುಕ್ತ ರಾಮ್ ಪ್ರಸಾದ್ ಮನೋಹರ್ ಹೇಳಿದ್ದಾರೆ.
ಕೆರೆಗಳ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ;
ಒಟ್ಟು 220 ಕೆರೆಗಳ ಪೈಕಿ ಯಲಹಂಕ ವಲಯದ ಹಾರೋಹಳ್ಳಿ, ಚಿಕ್ಕಬಸ್ತಿ, ಮಹದೇವಪುರ ವಲಯದ ಸಿದ್ದಾಪುರ, ಹೂಡಿ ಗಿಡ್ಡನಕೆರೆ, ಜಿಮ್‌ಕೇನಹಳ್ಳಿ, ಭೈರಸಂದ್ರ, ಗುಂಜೂರು, ರಾಜರಾಜೇಶ್ವರಿನಗರ ವಲಯದ ತಲಘಟ್ಟಪುರ, ಬೊಮ್ಮನಹಳ್ಳಿ ವಲಯದ ಗೌಡನಪಾಳ್ಯ, ಗುಬ್ಬಲಾಳ ಕೆರೆಯ ಅಭಿವೃದ್ಧಿ ಕಾರ್ಯವು ಭರದಿಂದ ಸಾಗಿದೆ. ಉಳಿದ ಕೆರೆಗಳ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ಕೆಲವು ಕೆರೆಗಳ ಅಭಿವೃದ್ಧಿ ಕೆಲಸ ಟೆಂಡರ್ ಹಂತದಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.
71 ಕೆರೆಗಳ ಅಭಿವೃದ್ಧಿ ಬಾಕಿ;
ಹೂಡಿ ಗಿಡ್ಡನಕೆರೆ ಅಭಿವೃದ್ಧಿಗೆ 3 ಕೋಟಿ ರೂ., ಗುಬ್ಬಲಾಳ ಕೆರೆ 4 ಕೋಟಿ, ಜಿಮ್‌ಕೇನಹಳ್ಳಿ ಕೆರೆ 3 ಕೋಟಿ, ಭೈರಸಂದ್ರ ಕೆರೆ 4 ಕೋಟಿ, ಗೌಡನಪಾಳ್ಯ ಕೆರೆ 4 ಕೋಟಿ, ತಲಘಟ್ಟಪುರ ಕೆರೆ 5 ಕೋಟಿ, ಗುಂಜೂರು ಕೆರೆ ಅಭಿವೃದ್ಧಿಗೆ 3 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಈ ಕೆರೆಗಳಲ್ಲಿ ತುಂಬಿರುವ ಹೂಳು ತೆರವುಗೊಳಿಸಿ, ಪುನರುಜ್ಜೀವನಗೊಳಿಸಲಾಗುತ್ತಿದೆ. ಇನ್ನುಳಿದ 71ಕೆರೆಗಳ ಅಭಿವೃದ್ಧಿ ಮಾಡಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.