ಬೆಳಗಾವಿ: ಸ್ಥಳಾಂತರಕ್ಕೆ ಸಿದ್ಧವಿರುವುದಾಗಿ ನದಿತೀರದ ಗ್ರಾಮಸ್ಥರು ಲಿಖಿತವಾಗಿ ತಿಳಿಸಿದರೆ ಇಡೀ ಗ್ರಾಮವನ್ನು ಎತ್ತರದ ಪ್ರದೇಶಕ್ಕೆ ಸಂಪೂರ್ಣ ಸ್ಥಳಾಂತರಿಸಿ ನವಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆ ಸೇರಿದಂತೆ ಎಲ್ಲ ಬಗೆಯ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಂಪಿಹೊಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಬಳಿಕ ಸುರೇಬಾನ ಗ್ರಾಮದ ಪರಿಹಾರ ಕೇಂದ್ರದಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರವಾಹದಿಂದ ಸಂಪೂರ್ಣ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಹೊಸ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಲು ಒಂದು ವಾರದೊಳಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಒಂದು ಮನೆ ನಿರ್ಮಾಣಕ್ಕೆ ಒಟ್ಟಾರೆ ಐದು ಲಕ್ಷ ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದ್ದು, ಮೊದಲ ಕಂತಿನಲ್ಲಿ ಅಡಿಪಾಯಕ್ಕೆ ನೀಡುವ ಒಂದು ಲಕ್ಷ ರೂಪಾಯಿ ಬಳಸಿಕೊಂಡು ಕೆಲಸ ಆರಂಭಿಸಬೇಕು ಎಂದರು.
ಅಡಿಪಾಯ ಹಾಕಲು ಮುಂದಾಗುವ ಕುಟುಂಬಗಳಿಗೆ ವಾರದೊಳಗೆ ಒಂದು ಲಕ್ಷ ರೂಪಾಯಿ ಮೊದಲ ಕಂತು ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಅದೇ ರೀತಿ ಮನೆಗಳ ದುರಸ್ತಿಗೆ ಒಂದು ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ತಾತ್ಕಾಲಿಕವಾಗಿ ಸಂತ್ರಸ್ತರಿಗೆ ಶೆಡ್ ನಿರ್ಮಾಣ ಕಾಮಗಾರಿಯನ್ನು ಮೂರ್ನಾಲ್ಕು ದಿನಗಳಲ್ಲಿ ಆರಂಭಿಸಬೇಕು ಎಂದು ಸೂಚನೆ ನೀಡಿದರು.
ಪ್ರವಾಹದಿಂದ ಹಾನಿಗೊಳಗಾದ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಕೂಡ ತಲಾ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಬೆಳೆನಾಶಕ್ಕೆ ಸೂಕ್ತ ಪರಿಹಾರ ನೀಡಲು ಕೇಂದ್ರದಿಂದ ಹೆಚ್ವಿನ ಪರಿಹಾರ ನೀಡಲು ಪ್ರಯತ್ನಿಸಲಾಗುತ್ತಿದ್ದು, ನೇಕಾರ ಕುಟುಂಬಗಳಿಗೂ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಿಎಂ ತಿಳಿಸಿದರು.
ರಾಮದುರ್ಗ ತಾಲ್ಲೂಕಿನ ಸುರೇಬಾನ ಗ್ರಾಮದಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಅನಾರೋಗ್ಯದಿಂದ ಮೃತಪಟ್ಟಿರುವ ದೊಡ್ಡ ಹಂಪಿಹೊಳಿ ಗ್ರಾಮದ ನಾಲ್ಕು ವರ್ಷದ ಬಾಲಕ ಅಬ್ದುಲ್‌ಸಾಬ್ ಮುಲ್ಲಾನವರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಪ್ರವಾಹ ಸಂದರ್ಭದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯೊಬ್ಬರು ಇದುವರೆಗೆ ಪತ್ತೆಯಾಗದಿರುವುದರಿಂದ ಅವರ ಕುಟುಂಬಕ್ಕೂ ಐದು ಲಕ್ಷ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸವದತ್ತಿ ಶಾಸಕ ಆನಂದ ಮಾಮನಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.