ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ ಯೋಧ ಹೆಚ್. ಗುರು ಪಾರ್ಥಿವ ಶರೀರ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಂತಿಮ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಿಎಂ, ಹುತಾತ್ಮ ಯೋಧ ಗುರು ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿದರು. ಅಲ್ಲದೆ, ಮೃತ ಯೋಧನ ಪತ್ನಿಗೆ ಸರ್ಕಾರಿ ಉದ್ಯೋಗ ಒದಗಿಸಿ ಆರ್ಥಿಕ ನೆರವು ನೀಡುವುದಾಗಿ ಸಿಎಂ ತಿಳಿಸಿದರು.
ಬಳಿಕ, ಪುಷ್ಪಗಳಿಂದ ಅಲಂಕೃತವಾದ ಸೇನಾ ವಾಹನದಲ್ಲಿ ಮಂಡ್ಯ ಜಿಲ್ಲೆಯ ಗುಡಿಗೆರೆಗೆ ಹುತಾತಂ ಯೋಧನ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ವಿಮಾನ ನಿಲ್ದಾಣದಿಂದ ಪಾರ್ಥಿವ ಶರೀರವನ್ನು ಸೇನಾ ವಾಹನಕ್ಕೆ ತರುವಾಗ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಪೊಲೀಸರೊಂದಿಗೆ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಗೃಹ ಸಚಿವ ಎಂ.ಬಿ. ಪಾಟೀಲ್, ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅರವಿಂದ ಲಿಂಬಾವಳಿ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಯೋಧನಿಗೆ ಈ ಸಂದರ್ಭದಲ್ಲಿ ಅಂತಿಮ ನಮನ ಸಲ್ಲಿಸಿದರು.