ಬೆಂಗಳೂರು: ಆಂಧ್ರಪ್ರದೇಶ ಸೇರಿದಂತೆ ಮತ್ತಿತರ ಕಡೆ ಶಿಕ್ಷಕರು ಮತ್ತು ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಸದ್ಯದ ಮಟ್ಟಿಗೆ ಶಾಲೆಗಳನ್ನು ತೆರೆಯದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ತೀರ್ಮಾನವಾಗಿರುವಂತೆ ಇದೇ ನವೆಂಬರ್ 17ರಿಂದ ಪದವಿ ಕಾಲೇಜುಗಳು ಪ್ರಾರಂಭವಾಗಲಿದ್ದು, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ಬಳಿಕವಷ್ಟೇ ಸರ್ಕಾರ ಶಾಲೆಗಳನ್ನು ಆರಂಭಿಸುವ ಬಗ್ಗೆ ಸೂಕ್ತವಾದ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಮೆಡಿಕಲ್, ಎಂಜಿನಿಯರಿಂಗ್, ಡಿಪ್ಲೊಮಾ ಸೇರಿದಂತೆ 17ರಿಂದ ಪದವಿ ಕಾಲೇಜುಗಳಲ್ಲಿ ಯುಜಿಸಿ (UGC) ಮಾರ್ಗಸೂಚಿ ಪ್ರಕಾರ ಪಾಠಪ್ರವಚನಗಳನ್ನು ನಡೆಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪದವಿ ಕಾಲೇಜುಗಳಿಗೆ ಮೊದಲ ಎರಡು ವಾರಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಹಾಜರಾಗುತ್ತಾರೆ? ಆ ವಿದ್ಯಾರ್ಥಿಗಳ ಹಾಗೂ ಪೋಷಕರ ಅಭಿಪ್ರಾಯವನ್ನು ಕ್ರೋಢೀಕರಿಸಿ ನಂತರ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ರಾಜ್ಯದಲ್ಲಿ ಶಾಲೆ ತೆರೆದ ನಾಲ್ಕೇ ದಿನದಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರಿಗೆ Corona Positive
ತರಾತುರಿಯಲ್ಲಿ ಶಾಲೆಗಳನ್ನು ಪ್ರಾರಂಭಿಸಿದರೆ ನಾಳೆ ಅಪ್ಪಿತಪ್ಪಿ ಒಂದಿಷ್ಟು ಶಿಕ್ಷಕರು ಇಲ್ಲವೇ ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ ಸರ್ಕಾರದ ಮೇಲೆ ಸಾರ್ವಜನಿಕರು ಅಕ್ರೋಶಗೊಳ್ಳಬಹುದು. ಇದರಿಂದಾಗಿ ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕಾಗಿ ಈವರೆಗೂ ನಡೆಸಿದ ಪ್ರಯತ್ನವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಹೀಗಾಗಿ ಆತುರದ ನಿರ್ಧಾರ ಬೇಡ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕೊರೊನಾ (Coronavirus) ಸಂದರ್ಭದಲ್ಲಿ ವಿದ್ಯಾಗಮ ಯೋಜನೆ ಆರಂಭಿಸಿದ ವೇಳೆ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕೆಲವು ಕಡೆ ಈ ಸೋಂಕಿಗೆ ಶಿಕ್ಷಕರೇ ಸಾವನ್ನಪ್ಪಿರುವ ಪ್ರಕರಣಗಳು ಕೂಡ ಬೆಳಕಿಗೆ ಬಂದಿದ್ದವು. ಹೀಗಾಗಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.
ಪ್ರಸ್ತುತ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ದೀಪಾವಳಿ ಹಬ್ಬದ ನಂತರ ಚಳಿಗಾಲ ಆವರಿಸುವುದರಿಂದ ಮತ್ತೆ ಈ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕರೋನಾ: ಈ ರಾಜ್ಯ ಸರ್ಕಾರದಿಂದ ದೀಪಾವಳಿ ಮಾರ್ಗಸೂಚಿ ಬಿಡುಗಡೆ, ಪ್ರಮುಖ ವಿಷಯಗಳನ್ನು ತಿಳಿಯಿರಿ
ನಾವು ಯಾವುದೇ ತೀರ್ಮಾನಗಳನ್ನು ಕೈಗೊಳ್ಳಬೇಕಾದರೆ ತಜ್ಞರ ಸಲಹೆ ಮತ್ತು ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಲಾಕಾಲೇಜುಗಳನ್ನು ಪ್ರಾರಂಭಿಸಿದರೆ ಖಾಸಗಿ ಲಾಭಕ್ಕೆ ಸರ್ಕಾರ ಇಳಿದಿದೆ ಎಂಬ ಆರೋಪ ಹೊತ್ತು ಕೊಳ್ಳಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತೆರೆಯುವ ಪ್ರಸ್ತಾವನೆ ಕೈಬಿಡಿ ಎಂದು ಅಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮುಂದಿನ ವಾರ ಉನ್ನತ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಶಿಕ್ಷಣ ಇಲಾಖೆಯ ಅಕಾರಿಗಳು, ಶಿಕ್ಷಣ ತಜ್ಞರು, ಕೋವಿಡ್ ತಜ್ಞರು ಸೇರಿದಂತೆ ಮತ್ತಿತರ ಜೊತೆ ಸಭೆ ನಡೆಸಲಾಗುವುದು. ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅಂತಿಮವಾಗಿ ಶಿಕ್ಷಣ ತಜ್ಞರು ಮತ್ತು ಪೋಷಕರ ಅಭಿಪ್ರಾಯ ಪಡೆದೇ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ.