ಪ್ರವಾಹ ಪರಿಹಾರ ಕಾರ್ಯ ಸಮರ್ಪಕವಾಗಿ ಅನುಷ್ಠಾನವಾಗಬೇಕು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಅತಿವೃಷ್ಟಿಯಿಂದ ಹಾನಿಗೀಡಾದ ಹಾಗೂ ಸಂಪೂರ್ಣ ಬಿದ್ದು ಹೋಗಿರುವ ಮನೆಗಳ ಸಂಖ್ಯೆ, ರಸ್ತೆ, ಸೇತುವೆ, ಕಟ್ಟಡಗಳ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾಗಿರುವ ಹಾನಿಯ ಬಗ್ಗೆ ಸಮರ್ಪಕವಾದ ಸಮೀಕ್ಷೆ ನಡೆಸಬೇಕು. ಕೃಷಿ ಹಾಗೂ ತೋಟಗಾರಿಕೆ ಪ್ರದೇಶ ಹಾಗೂ ಬೆಳೆಗಳಿಗೆ ಹಾನಿಯ ಕುರಿತು ನೆರೆ ನೀರು ಖಾಲಿಯಾದ ಬಳಿಕ ನಿಖರವಾಗಿ ಅಂದಾಜಿಸಬೇಕು- ಅಧಿಕಾರಿಗಳಿಗೆ ಸಿಎಂ ಸೂಚನೆ

Last Updated : Aug 14, 2019, 07:01 AM IST
ಪ್ರವಾಹ ಪರಿಹಾರ ಕಾರ್ಯ ಸಮರ್ಪಕವಾಗಿ ಅನುಷ್ಠಾನವಾಗಬೇಕು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ title=
Photo Courtesy: Facebook

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಕುರಿತು ಒಂದು ವಾರದ ಒಳಗಾಗಿ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಿ, ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ನೆರೆ ಪರಿಸ್ಥಿತಿ ಕುರಿತು ಅಧಿಕಾರಿಗಳ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಈ ಮೇಲಿನ ಸೂಚನೆಗಳನ್ನು ನೀಡಿದರು.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 7 ಮಂದಿಯ ಪ್ರಾಣ ಹಾನಿ ಸಂಭವಿಸಿದ್ದು, ಎಲ್ಲಾ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರಧನವನ್ನು ಒದಗಿಸಬೇಕು. ಅತಿವೃಷ್ಟಿಯಿಂದ ಹಾನಿಗೀಡಾದ ಹಾಗೂ ಸಂಪೂರ್ಣ ಬಿದ್ದು ಹೋಗಿರುವ ಮನೆಗಳ ಸಂಖ್ಯೆ, ರಸ್ತೆ, ಸೇತುವೆ, ಕಟ್ಟಡಗಳ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾಗಿರುವ ಹಾನಿಯ ಬಗ್ಗೆ ಸಮರ್ಪಕವಾದ ಸಮೀಕ್ಷೆ ನಡೆಸಬೇಕು. ಕೃಷಿ ಹಾಗೂ ತೋಟಗಾರಿಕೆ ಪ್ರದೇಶ ಹಾಗೂ ಬೆಳೆಗಳಿಗೆ ಹಾನಿಯ ಕುರಿತು ನೆರೆ ನೀರು ಖಾಲಿಯಾದ ಬಳಿಕ ನಿಖರವಾಗಿ ಅಂದಾಜಿಸಬೇಕು ಎಂದು ಬಿಎಸ್‌ವೈ ಹೇಳಿದರು.

ಶಾಲೆಗಳ ಆರಂಭಕ್ಕೂ ಮೊದಲು ಕಟ್ಟಡ ಸುರಕ್ಷತೆ ಖಾತ್ರಿ ಕಡ್ಡಾಯ:
ಶಾಲೆಗಳನ್ನು ಆರಂಭಿಸುವ ಮೊದಲು ಶಾಲಾ ಕಟ್ಟಡದ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ಇದಕ್ಕಾಗಿ ತಾಂತ್ರಿಕ ಅಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆಯಬೇಕು. ಒಂದು ವೇಳೆ ನಿಷ್ಕಾಳಜಿಯಿಂದ ಕೊಠಡಿಗಳು ಕುಸಿದು ಅನಾಹುತಗಳು ಸಂಭವಿಸಿದರೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಈಗಾಗಲೇ ಕುಸಿದು ಬಿದ್ದಿರುವ ಕೊಠಡಿ, ಶಾಲೆ, ಶಿಥಿಲಗೊಂಡಿರುವ ಶಾಲೆ ಮುಂತಾದ ಕಡೆಗಳಲ್ಲಿ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಬೇಕು. ಶಾಲೆಗಳ ಕೊಠಡಿ ನಿರ್ಮಾಣ, ಶಿಥಿಲಗೊಂಡಿರುವ ಶಾಲೆಗಳ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಸಿಎಂ ತಿಳಿಸಿದರು.

ಕೆರೆಗಳ ನೀರು ಪೋಲಾಗದಂತೆ ಮುನ್ನೆಚ್ಚರಿಕೆ:
ಅತಿವೃಷ್ಟಿಯಿಂದ ಹಾನಿಗೀಡಾಗಿರುವ ರಸ್ತೆ ದುರಸ್ತಿ, ಸೇತುವೆಗಳ ಪುನರ್ ನಿರ್ಮಾಣ ಸೇರಿದಂತೆ ಸಂಪರ್ಕ ವ್ಯವಸ್ಥೆ ಸರಿಪಡಿಸಲು ತಕ್ಷಣ ಕಾರ್ಯ ಆರಂಭಿಸಬೇಕು. ದುರಸ್ತಿ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ತುಂಬಿದ್ದು, ಅವುಗಳು ಒಡೆದು ನೀರು ಪೋಲಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಏತ ನೀರಾವರಿ ಯೋಜನೆಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೆರವಾಗುವಂತೆ ಜಿಲ್ಲಾ ನೋಡಲ್ ಕಾರ್ಯದರ್ಶಿ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು.

ಹಾನಿ ವಿವರ: 
ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿ ಬಗ್ಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾಹಿತಿ ನೀಡಿದರು. ಅತಿವೃಷ್ಟಿಯಿಂದ ಒಟ್ಟು 7 ಮಂದಿ ಸಾವನ್ನಪ್ಪಿದ್ದು, ಇದುವರೆಗೆ ಮೂರು ಪ್ರಕರಣಗಳಲ್ಲಿ ಒಟ್ಟು 15ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 87 ಜಾನುವಾರುಗಳು ಸಾವಿಗೀಡಾಗಿದ್ದು 18.81 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. 1105 ಮನೆಗಳಿಗೆ ಹಾನಿ ಅಂದಾಜಿಸಲಾಗಿದ್ದು 4.94 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ ಎಂದು ಹೇಳಿದರು.

ಅತಿವೃಷ್ಟಿಯಿಂದ 13462 ಹೆಕ್ಟೇರ್ ಭತ್ತ, 2003 ಹೆ. ಮೆಕ್ಕೆ ಜೋಳ ಸೇರಿದಂತೆ ಒಟ್ಟು 15470ಹೆ. ಜಲಾವೃತಗೊಂಡಿದ್ದು 13.18ಕೋಟಿ ರೂ. ನಷ್ಟವನ್ನು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. 2552 ಹೆ. ಅಡಿಕೆ, 40 ಹೆ. ಬಾಳೆ, 1002 ಹೆ. ಶುಂಠಿ ಸೇರಿದಂತೆ 3712 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಜಲಾವೃತವಾಗಿದ್ದು, ಹಾನಿಯನ್ನು ಅಂದಾಜಿಸಲಾಗುತ್ತಿದೆ. 

ಅತಿವೃಷ್ಟಿಯಿಂದ 437 ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, 342 ಗ್ರಾಮಗಳಲ್ಲಿ ಯಥಾಸ್ಥಿತಿಗೆ ತರಲಾಗಿದೆ. 148 ಟ್ರಾನ್ಸ್‍ಫಾರ್ಮರ್ ಹಾನಿಗೊಳಗಾಗಿದ್ದು, 52 ಸರಿಪಡಿಸಲಾಗಿದೆ. 1076 ಕಂಬಗಳು ಬಿದ್ದಿದ್ದು 465 ಕಂಬಗಳನ್ನು ಹೊಸದಾಗಿ ಅಳವಡಿಸಲಾಗಿದೆ. ಮೆಸ್ಕಾಂಗೆ ಒಟ್ಟು 1.78ಕೋಟಿ ರೂ. ಹಾನಿ ಅಂದಾಜಿಸಲಾಗಿದೆ.

ಅತಿವೃಷ್ಟಿಯಿಂದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಆಸ್ತಿಪಾಸ್ತಿಗಳಿಗೆ 87 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 49 ಕೋಟಿ ರೂ., ನಗರಾಭಿವೃದ್ಧಿ ಇಲಾಖೆಗೆ 292ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯ ಆಸ್ತಿಪಾಸ್ತಿಗಳಿಗೆ 41 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮುಖ್ಯಮಂತ್ರಿ ಅವರ ಸಲಹೆಗಾರ ಲಕ್ಷ್ಮಿನಾರಾಯಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಶಾಂತರಾಜ್, ಸಿಇಒ ಶಿವರಾಮೇಗೌಡ ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

Trending News