ಮೈಸೂರು: ರಾಜೀನಾಮೆ ನೀಡುವಂತೆ ಸಚಿವ ಶ್ರೀರಾಮುಲು ಸವಾಲು ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ವಾರ್ಥಕ್ಕೆ ಮಾತನಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಹುಣಸೂರು ಉಪಚುನಾವಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ಹೆಚ್. ವಿಶ್ವನಾಥ್ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಬಾದಾಮಿ ಶಾಸಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ, ನಾನೇ ಅವರೆದುರು ಚುನಾವಣೆಗೆ ನಿಲ್ಲುವೆ ಎಂದು ಸವಾಲು ಹಾಕಿದ್ದರು.
ಶ್ರೀರಾಮುಲು ಅವರ ಸವಾಲಿಗೆ ಇಂದು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸ್ವಾರ್ಥಕ್ಕೆ ಮಾತನಾಡುವವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಪಾಪ ಅವರು ನನ್ನ ಮೇಲೆ ಸೋತಿದ್ದಾರೇ ಅದಕ್ಕೆ ಈ ರೀತಿ ಮಾತನಾಡುತ್ತಾರೆ. ಶ್ರಿರಾಮುಲು ಹತಾಶರಾಗಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಆಗಲೇ ರಾಜೀನಾಮೆ ಕೊಡಬೇಕಿತ್ತು ಎಂದರು.
ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಪ್ರಚಾರ ಮಾಡಿದ್ದರು. ಈಗ ಅವರಿಗೆ ಡಿಸಿಎಂ ಪಟ್ಟ ಕೊಟ್ಟರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಶಾಸಕರಲ್ಲದವರಿಗೆ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಎಸ್.ಟಿ ಗೆ 7% ಮೀಸಲಾತಿ ನೀಡದಿದ್ದರೆ ರಾಜೀನಾಮೆ ಕೊಡುತ್ತೇನೆ. ಒಂದು ನಿಮಿಷ ಇರಲ್ಲ ಎಂದು ಶ್ರೀರಾಮುಲು ಹೇಳಿದ್ದರು. ಈಗ ಏನಾಯಿತು ಎಂದು ಲೇವಡಿ ಮಾಡಿದರು.
ಪಾಪ ಶ್ರೀರಾಮುಲು ಬಗ್ಗೆ ಏನು ಮಾತನಾಡೋದು. ಸ್ವಾರ್ಥ ಮಾಡುವವರೆಲ್ಲಾ ಒಂದು ಕಡೆ ಸೇರಿಕೊಂಡಿದ್ದಾರೆ. ಮೌಲ್ಯ ಸಿದ್ದಾಂತ ಏನೂ ಇಲ್ಲ. ಇವರ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್‌ನಿಂದ ಮತದಾರರಿಗೆ ಹಣ ಹಂಚಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಜನರು ಬಿಜೆಪಿ-ಜೆಡಿಎಸ್ ಪರ ಇಲ್ಲ. ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ. 30 ಸಾವಿರ ಸೀರೆ ಸಿಕ್ಕಿತು ಅದು ಯಾರದು ? ಅದು ಯಾರ ದುಡ್ಡು ? ಎಲ್ಲಿಂದ ಬಂತು ? ಇದು ಅಕ್ರಮ ಅಲ್ವಾ ? ಕಾನೂನಿನಲ್ಲಿ ಸೀರೆ ಹಂಚುವುದಕ್ಕೆ ಅವಕಾಶ ಇದೆಯಾ ? ಸರ್ಕಾರದಲ್ಲಿ ಇದ್ದುಕೊಂಡು ಅಕ್ರಮ ಮಾಡುತ್ತಾರೆ. ಇವರಿಗೆ ಯಾವ ನೈತಿಕತೆ ಇದೆ ? ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲು ಯಾವ ನೈತಿಕತೆ ಇದೆ ? ಅವರು ಚುನಾವಣಾ ಕಣದಲ್ಲಿರಲು ಅರ್ಹರಾ ? ಯೋಗೇಶ್ವರ್ ಪೋಟೋ, ಬಿಜೆಪಿ ಅವರ ಪೋಟೋ, ವಿಶ್ವನಾಥ್ ಪೋಟೋ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯಾರ ಫೋಟೋ ಇದೆ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.