ಮೈಸೂರು: ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್ ಎಸ್ ಹಾಗೂ ಕಬಿನಿ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಕಾವೇರಿ ಮತ್ತು ಕಬಿನಿ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಉಂಟಾಗಿದೆ.
ಕೊಳ್ಳೇಗಾಲ ತಾಲೂಕಿನ ಹಲವು ಗ್ರಾಮಗಳು ಕೆರೆಯಂತಾಗಿವೆ. ತಾಲೂಕಿನ ದಾಸನಪುರ, ಹಳೆ ಹಂಪಾಪುರ, ಮುಳ್ಳೂರು ಸೇರಿದಂತೆ ಹಲವು ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ. ಇದರಿಂದಾಗಿ ಊರು ಬಿಟ್ಟು ನೆಂಟರ ಮನೆಗೆ ಹಾಗೂ ಗಂಜಿ ಕೇಂದ್ರಗಳತ್ತ ಜನ ತೆರಳುತ್ತಿದ್ದಾರೆ.
ಅಲ್ಲದೆ ಗ್ರಾಮದ ಎಲ್ಲಾ ಜಮೀನುಗಳು ಜಲಾವೃತವಾಗಿದ್ದು, ಕಬ್ಬು, ಭತ್ತ, ರಾಗಿ, ಜೋಳ ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗಿವೆ.
ಮತ್ತೊಂದೆಡೆ, ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿದ್ದು ಜಲಾಶಯದಲ್ಲಿ 33 ಕ್ರಸ್ಟ್ಗೇಟ್ಗಳ ಮೂಲಕ ಎರಡು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿದ್ದರಿಂದ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಯಾಗಿದೆ.