ಬೆಂಗಳೂರು: ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸಿಂಧ್ಯಾ ಜೊತೆ ಮಾತುಕತೆ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇಪತ್ಯಕ್ಕೆ ಸರಿದಿದ್ದ ಸಿಂಧ್ಯಾ ಅವರ ಸಕ್ರಿಯ ರಾಜಕಾರಣಕ್ಕೆ ಮತ್ತೆ ವೇದಿಕೆ ಕಲ್ಪಿಸಿದ್ದಾರೆ.
ಸಕ್ರೀಯ ರಾಜಕಾರಣಕ್ಕೆ ಬನ್ನಿ ಎಂದು ಆಹ್ವಾನಿಸಿದ ಎಚ್ಡಿಡಿ ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಂಧ್ಯಾ ಸೋಮವಾರ ಮಧ್ಯಾಹ್ನ 12:15 ಕ್ಕೆ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಪೂಜಾ ಕಾರ್ಯಕ್ರಮದ ನಂತರ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ. ಆ ಮೂಲಕ ಸಕ್ರೀಯವಾಗಿ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಪ್ರಸ್ತುತ ಸಿಎಂ ಪ್ರತಿನಿಧಿಯಾಗಿರುವ ವರುಣಾ ಕ್ಷೇತ್ರದಿಂದ ಪಿ.ಜಿ.ಆರ್. ಸಿಂಧ್ಯಾ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಸ್ಪಷ್ಟಪಡಿಸಿದ್ದಾರೆ.
ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದ ಪಿ.ಜಿ.ಆರ್. ಸಿಂಧ್ಯಾ ಕನಕಪುರದಲ್ಲಿ ಜನತಾಪರಿವಾರದಿಂದ 1983 ರಲ್ಲಿ ಶಾಸಕರಾಗಿದ್ದರು. ನಂತರ ಹೆಗಡೆ ಅವರಿಗೋಸ್ಕರ ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕ್ಷೇತ್ರ ಬಿಟ್ಟುಕೊಟ್ಟಿದ್ದರು. 1985 ರಲ್ಲಿ ಮತ್ತೆ ಕನಕಪುರದಲ್ಲಿ ಗೆಲುವು ಸಾಧಿಸಿದ್ದ ಸಿಂಧ್ಯಾ 1994 ರಲ್ಲಿ ದೇವೇಗೌಡರ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು. 2008 ರಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷರಾಗಿದ್ದ ಇವರು ಮತ್ತೆ ಜೆಡಿಎಸ್ ಸೇರ್ಪಡೆಯಾಗಿ ಕನಕಪುರದಿಂದ ಸ್ಪರ್ಧಿಸಿ ಡಿ.ಕೆ.ಶಿವಕುಮಾರ್ ಎದುರು ಸೋಲನುಭವಿಸಿದರು. ಬಳಿಕ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದ ಇವರು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆಹ್ವಾನಕ್ಕೆ ತಲೆದೂಗಿದ್ದು ಇಂದಿನಿಂದ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಲಿದ್ದಾರೆ.