ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಪಕ್ಷದ ಪರ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿ 10,19 ಮತ್ತು27ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಲೋಕಸಭಾ ಚುನಾವಣಾ ಸಿದ್ಧತಾ ಸಭೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಈ ವಿಷಯ ಪ್ರಕಟಿಸಿದರು. ಪ್ರಧಾನಿಯವರ ಕಾರ್ಯಕ್ರಮಗಳ ಉಸ್ತುವಾರಿಯನ್ನು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ಫೆಬ್ರವರಿ 10ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಪಕ್ಷದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ 19ರ ಸಮಾವೇಶಕ್ಕೆ ಇನ್ನೂ ಸ್ಥಳ ನಿಗದಿಪಡಿಸಲಾಗಿಲ್ಲ. ಆ ಬಳಿಕ ಫೆಬ್ರವರಿ ಕೊನೆ ವಾರದಲ್ಲಿ ಮತ್ತೊಂದು ಸಮಾವೇಶ ನಡೆಸಲು ಉದ್ದೇಶಿಸಿದ್ದು, ಒಟ್ಟು ಮೂರು ಸಮಾವೇಶದಲ್ಲಿ ಪ್ರಧಾನಿ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಎಸ್ ವೈ ಹೇಳಿದರು.