ನವದೆಹಲಿ: ಉತ್ತರ ಕರ್ನಾಟಕದ ಜನರ ದಶಕಗಳ ಬೇಡಿಕೆಯಾದ ಕಳಸಾ-ಬಂಡೂರಿ ನಾಲೆಗಳ ಕುಡಿಯುವ ನೀರಿನ ಯೋಜನೆಗೆ ಆಗ್ರಹಿಸಿ ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಜನಸಾಮಾನ್ಯರ ವೇದಿಕೆ ಅಧ್ಯಕ್ಷ ಡಾ. ಡಿ. ಅಯ್ಯಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಉತ್ತರ ಕರ್ನಾಟಕದ ನರಗುಂದ ಮತ್ತು ನವಲುಗುಂದ ಪ್ರದೇಶದ ಜನರು ಕುಡಿಯುವ ನೀರಿಗೆ ಆಗ್ರಹಿಸಿ ಸತತ ಎರಡು ವರ್ಷಗಳಿಂದ ಪ್ರತಿಭಟನೆ ನಡೆಸಿದ್ದು ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂದು ಇಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಡಾ. ಡಿ. ಅಯ್ಯಪ್ಪ ತಿಳಿಸಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಾ. ಡಿ. ಅಯ್ಯಪ್ಪ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಕಡೆಗಣಿಸಿವೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲರೂ ಡೋಂಗಿ ನಾಟಕವಾಡುತ್ತಿದ್ದಾರೆ. ಮೂರು ದಶಕಗಳ ನಮ್ಮ ಹೋರಾಟಕ್ಕೆ ತಲೆಕೆಡಿಸಿಕೊಳ್ಳದ ರಾಜಕೀಯ ಪಕ್ಷಗಳು ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ ಉತ್ತರ ಕರ್ನಾಟಕದ ಜಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಅನಿವಾರ್ಯವಾಗಿ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವುದಾಗಿ ತಮ್ಮ ಅಳಲು ತೋಡಿಕೊಂಡರು.
ಕಳಸಾ-ಬಂಡೂರಿ ಉತ್ತರ ಕರ್ನಾಟಕದ ಜನರ ಕುಡಿಯುವ ನೀರಿನ ಯೋಜನೆ, ಕಳಸಾ ಬಂಡೂರಿ ಮಲಪ್ರಭಾ ನದಿಗಳ ಜೋಡಣೆ ಆಗಲೇಬೇಕು ಎಂದು ಆಗ್ರಹಿಸಿದ ಅವರು, ಕುಡಿಯುವ ನೀರು ಒದಗಿಸುವ ಈ ಮಹತ್ವದ ಯೋಜನೆ ಕೆಲ ರಾಜಕೀಯ ವ್ಯಕ್ತಿಗಳಿಂದ ನೆನೆಗುದಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರಿಗೂ ಮನವಿ ಮಾಡುವುದಾಗಿ ಡಾ. ಡಿ. ಅಯ್ಯಪ್ಪ ಇದೇ ವೇಳೆ ಮಾಧ್ಯಮಗಳಿಗೆ ತಿಳಿಸಿದರು.