ಬೆಂಗಳೂರು: ಇತ್ತೀಚಿಗೆ ಬಿಡುಗಡೆಯಾದ ಶಿವಣ್ಣ ಅಭಿನಯದ 'ಟಗರು' ಚಿತ್ರ ರಾಜ್ಯದಲ್ಲಿ ಸಾಕಷ್ಟು ಹವಾ ಮಾಡುತ್ತಿದೆ. ಅದೇ ರೀತಿಯಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಪಟ್ಟುಗಳನ್ನು ಬಳಸಿ 'ಟಗರಿನ' ರೀತಿಯಲ್ಲಿಯೇ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರಿಗೆ ತಿವಿಯುತ್ತಿರುವುದು ನಿಜಕ್ಕೂ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೌಂಟರ್ ಗೆ ರೀ ಕೌಂಟರ್ ಕೊಡುತ್ತಲೇ ಪ್ರಧಾನಿ ಮೋದಿಯವರ ನಿದ್ದೆಗೆಡಿಸಿರುವ ಸಿದ್ದರಾಮಯ್ಯ, ಆ ಮೂಲಕ ಈಗ ರಾಷ್ಟ್ರೀಯ ಮಾಧ್ಯಮಗಳ ಕೇಂದ್ರ ಬಿಂದುವಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯನವರು, ಮೋದಿ ಸರ್ಕಾರವು ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ಕೊಡುವುದರ ಕುರಿತಾಗಿ ಪ್ರಸ್ತಾಪಿಸುತ್ತಾ "ಐಪಿಎಲ್ ಹಣದೋಚಿ ಲಲಿತ್ ಮೋದಿ ದೇಶ ತೊರೆದಿದ್ದ, ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಸಾರ್ವಜನಿಕರ ಹಣ ದೋಚಿ ನೀರವ್ ಮೋದಿ ದೇಶದಿಂದ ಓಡಿ ಹೋಗಿದ್ದಾನೆ. ಪ್ರಧಾನಮಂತ್ರಿಯ ಪರೋಕ್ಷ ಬೆಂಬಲವಿಲ್ಲದೆ ಈ ಘಟನೆ ನಡೆದಿರಲೂ ಸಾಧ್ಯವೇ ಇಲ್ಲ ಎಂದು ಅವರು ಪ್ರಧಾನಿ ಮೋದಿಯ ಮೇಲೆ ನೇರ ವಾಗ್ದಾಳಿ ನಡೆಸಿದರು.
ಹಿಂದೊಮ್ಮೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರ್ನಾಟಕಕ್ಕೆ ಬಂದಾಗ ಗೋವು ಹತ್ತ್ಯೆಯ ವಿಚಾರವಾಗಿ ಸಿದ್ದರಾಮಯ್ಯರನ್ನು ಟೀಕಿಸಿದ್ದಕ್ಕೆ ಪ್ರತಿಯಾಗಿ ಅವರು "ನಾನು ದನ ಸಾಕಿದ್ದೇನೆ, ಮೇಯಿಸಿದ್ದೇನೆ, ಸೆಗಣಿ ಬಾಚಿದ್ದೇನೆ. ಗೋರಕ್ಷಣೆ-ಪಾಲನೆ ಬಗ್ಗೆ ಪಾಠ ಮಾಡುವ ಯೋಗಿ ಆದಿತ್ಯನಾಥ್ ದನ ಸಾಕಿದ್ದಾರಾ? ಇವರಿಗೆ ಗೋರಕ್ಷಣೆ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ?' ಎಂದು ಪ್ರತ್ಯುತ್ತರ ನೀಡಿದ್ದರು.