ಬೆಂಗಳೂರು: ಈ ಬಾರಿಯ ಚುನಾವಣೆ ಕೇವಲ ಬಿಜೆಪಿ-ಕಾಂಗ್ರೆಸ್ ನಡುವಿನ ಚುನಾವಣಾ ಹೋರಾಟ ಅಲ್ಲ, ದೇಶದ, ಯುವ ಸಮುದಾಯದ ಭವಿಷ್ಯ ನಿರ್ಧರಿಸುವ ಚುನಾವಣೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಭೈರೇಗೌಡ ಅವರ ಪರವಾಗಿ ಕಮ್ಮಗೊಂಡನಹಳ್ಳಿಯಲ್ಲಿ ರೋಡ್ ಶೋನಲ್ಲಿ ಮಾತನಾಡಿದ ಅವರು,
ಸೈದ್ದಾಂತಿಕವಾಗಿ ಜೆಡಿಎಸ್ ಎರಡು ಪಕ್ಷಗಳು ಒಂದೇ ರೀತಿ ಇವೆ. ಅದರಂತೆಯೇ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ.
ಮೊದಲಿಗೆ ಉತ್ತರ ಕ್ಷೇತ್ರವನ್ನು ಹೆಚ್.ಡಿ ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದೆವು.ದೇವೇಗೌಡರು ತುಮಕೂರು ಬಯಸಿದ್ದರಿಂದ ಕೃಷ್ಣ ಭೈರೇಗೌಡರನ್ನು ಇಲ್ಲಿನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ. ಇಲ್ಲಿಂದ ಗೆದ್ದು ಹೋದ ಡಿ.ವಿ. ಸದಾನಂದಗೌಡರು ಯಾವುದೇ ಕೆಲಸ ಮಾಡಲಿಲ್ಲ. ಬದಲಿಗೆ ಡಿವಿಎಸ್ ನಗುತ್ತಲೇ ಇಡೀ ಐದು ವರ್ಷ ಕಾಲ ಕಳೆದರು. ಇದೀಗ ನಿಮ್ಮ ಕೆಲಸ ಮಾಡಿಕೊಡಬಲ್ಲ ದಕ್ಷ ಅಭ್ಯರ್ಥಿ ಕೊಟ್ಟಿದ್ದೇವೆ. ಇವರು ಶಾಸಕನಾಗಿ ಸಂಸದನಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ ಎಂದರು.
ಐದು ವರ್ಷ ಬರೀ ಮಾತಿನ ಮೋಡಿ ಪ್ರದರ್ಶಿಸಿದ ಮೋದಿ:
ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳಲ್ಲಿ ಬರೀ ಮಾತಿನ ಮೋಡಿ ಅಷ್ಟೇ ಪ್ರದರ್ಶಿಸಿದರು. ಪ್ರಪಂಚದಲ್ಲಿ ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ನಿರುದ್ಯೋಗ, ಬೆಲೆ ನಿಯಂತ್ರಣದಲ್ಲಿ ಸಂಪೂರ್ಣ ವಿಫಲರಾದರು. ಕಪ್ಪು ಹಣ ಬಿಳಿ ಮಾಡುತ್ತೇವೆ ಎಂದು ಇದ್ದ ನೋಟುಗಳನ್ನು ಕಾಣೆ ಮಾಡಿದರು. ಜಿ.ಎಸ್.ಟಿ ಜಾರಿಗೆ ತಂದು ಹೋಟೆಲ್ ನಲ್ಲಿನ ಮಜ್ಜಿಗೆ ಮೇಲೂ ತೆರಿಗೆ ಹಾಕಿದರು ಎಂದು ಡಿಸಿಎಂ ಪರಮೇಶ್ವರ ಪ್ರಧಾನಿ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದರು.