ಚಿಕ್ಕಮಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಚಿಗೆ ತಾವು ದತ್ತಾತ್ರೇಯ ಗೋತ್ರದ ಬ್ರಾಹ್ಮಣ ಎಂದು ಹೇಳಿಕೊಂಡಿದ್ದಾರೆ. ಆದರೆ ಇವರಿಗೆ ಬ್ರಾಹ್ಮಣ ಜಾತಿಯ ಸರ್ಟಿಫಿಕೇಟ್ ನೀಡಿದ್ದು ಯಾರು ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾನ್ಯವಾಗಿ ತಂದೆಯ ಜಾತಿಗಯನ್ನು ಅನುಸರಿಸಿ ಜಾತಿ ಪ್ರಮಾಣಪತ್ರ ನೀಡಲಾಗುತ್ತದೆ. ಅಂತರ ಧರ್ಮೀಯ, ಅಂತರ್ಜಾತಿ ವಿವಾಹವಾಗಿದ್ದರೂ ಸಹ ಅಪ್ಪನ ಜಾತಿಯ ಅನ್ವಯವೇ ಜಾತಿ ಪ್ರಮಾಣಪತ್ರ ನೀಡುತ್ತಾರೆ. ರಾಹುಲ್ ಗಾಂಧಿ ಹೆಸರು ಚರ್ಚ್ ನಲ್ಲಿ ಸೇರ್ಪಡೆಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಿರುವಾಗ ಬ್ರಾಹ್ಮಣ ಜಾತಿ ಪ್ರಮಾಣ ಪತ್ರ ಸಿಕ್ಕಿದ್ದು ಯಾವಾಗ ಎಂದು ಶೋಭಾ ಪ್ರಶ್ನಿಸಿದ್ದಾರೆ.
ಐದು ರಾಜ್ಯಗಳ ವುಧನ್ಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮುದಾಯದ ಮತಗಳಿಸುವ ಉದ್ದೇಶದಿಂದ ರಾಹುಲ್ ಗಾಂಧಿ ರಾಜಕೀಯ ಲಾಭಕ್ಕಾಗಿ ಈ ರೀತಿ ಸುಳ್ಳು ಹೇಳುತ್ತಿದ್ದಾರೆ. ಪ್ರತಿಷ್ಟಿತ ರಾಷ್ಟ್ರೀಯ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ ಎಂದು ಶೋಭಾ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು ಕಾಂಗ್ರೆಸ್ ಹಾಗೂ ಮಹಾಘಟ ಬಂಧನ ನಾಯಕರಲ್ಲಿ ಭಯ ಸೃಷ್ಟಿ ಮಾಡಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.