ಭಾರತದ ಪ್ರಯಾಣಿಕ ಸಾರಿಗೆ ದೈತ್ಯರಾದ ಓಲಾ ಊಬರ್ ಗಳನ್ನು ನಡುಗಿಸಿದ ಒಎನ್‌ಡಿಸಿಯ ಶೂನ್ಯ ಕಮಿಷನ್ ಸೇವೆ

ಬೆಂಗಳೂರಿನಲ್ಲಿ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಜೊತೆ ನಮ್ಮ ಯಾತ್ರಿ ಸಂಸ್ಥೆ ಕೈಜೋಡಿಸಿದ್ದು, ಚಾಲಕರು ಮತ್ತು ಪ್ರಯಾಣಿಕರಿಂದ ಕಮಿಷನ್ ಪಡೆದುಕೊಳ್ಳದೆ ತ್ರಿಚಕ್ರ ವಾಹನ ಸವಾರಿ ಸೇವೆ ಒದಗಿಸಲಿದೆ.

Written by - Girish Linganna | Edited by - Ranjitha R K | Last Updated : Mar 27, 2023, 11:05 AM IST
  • ಯಾವುದೇ ಕಮಿಷನ್ ರಹಿತ ಪ್ರಯಾಣ ಸೇವೆ
  • ಊಬರ್ ಓಲಾ ಸಂಸ್ಥೆಗಳ ಉದ್ಯಮಕ್ಕೆ ಬೀಳುವುದು ಹೊಡೆತ
  • 45,000 ಆಟೋ ರಿಕ್ಷಾ ಚಾಲಕರ ನೋಂದಣಿ
ಭಾರತದ ಪ್ರಯಾಣಿಕ ಸಾರಿಗೆ ದೈತ್ಯರಾದ ಓಲಾ ಊಬರ್ ಗಳನ್ನು ನಡುಗಿಸಿದ ಒಎನ್‌ಡಿಸಿಯ ಶೂನ್ಯ ಕಮಿಷನ್ ಸೇವೆ title=

ಬೆಂಗಳೂರು : ಭಾರತ ಸರ್ಕಾರದ ಬೆಂಬಲಿತ ಓಪನ್ ಕಾಮರ್ಸ್ ನೆಟ್‌ವರ್ಕ್ ಸಂಸ್ಥೆ ಪ್ರಯಾಣಿಕರಿಗೆ ಯಾವುದೇ ಕಮಿಷನ್ ರಹಿತ ಪ್ರಯಾಣ ಸೇವೆಯನ್ನು ಒದಗಿಸಲು ಮುಂದಾಗಿದೆ. ಈ ಕ್ರಮ ಪ್ರಮುಖ ಪ್ರಯಾಣಿಕ ಸೇವಾ ಸಂಸ್ಥೆಯಾದ ಊಬರ್ ಟೆಕ್ನಾಲಜೀಸ್‌ ಇಂಕ್ (ಊಬರ್) ಹಾಗೂ ಅದರ ದೇಶೀಯ ಪ್ರತಿಸ್ಪರ್ಧಿಯಾದ ಓಲಾ ಸಂಸ್ಥೆಗಳ ಉದ್ಯಮಕ್ಕೆ ಹೊಡೆತ ನೀಡುವ ಸಾಧ್ಯತೆಗಳಿವೆ.

ಬೆಂಗಳೂರಿನಲ್ಲಿ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಜೊತೆ ನಮ್ಮ ಯಾತ್ರಿ ಸಂಸ್ಥೆ ಕೈಜೋಡಿಸಿದ್ದು, ಚಾಲಕರು ಮತ್ತು ಪ್ರಯಾಣಿಕರಿಂದ ಕಮಿಷನ್ ಪಡೆದುಕೊಳ್ಳದೆ ತ್ರಿಚಕ್ರ ವಾಹನ ಸವಾರಿ ಸೇವೆ ಒದಗಿಸಲಿದೆ.

ಇದನ್ನೂ ಓದಿ : Shiggaon Constituency : ಶಿಗ್ಗಾವಿಯಲ್ಲಿ ಸಿಎಂ ಬೊಮ್ಮಾಯಿಗೆ ಶಾಕ್ ನೀಡಿದ ಕಾಂಗ್ರೆಸ್ ನಾಯಕರು!

ಪ್ರಸ್ತುತ ಬಳಕೆದಾರರು ಮತ್ತು ಪ್ರಯಾಣಿಕರು ಓಲಾ ಮತ್ತು ಊಬರ್ ಸಂಸ್ಥೆಗಳೊಡನೆ ಕಾರುಗಳ ಅಲಭ್ಯತೆ, ನಂಬಿಕಾರ್ಹವಲ್ಲದ ಸೇವೆ ಮತ್ತು ಅಪಾರ ಪ್ರಮಾಣದ ಕಮಿಷನ್ ಕಾರಣಗಳಿಗಾಗಿ ಅಸಮಾಧಾನ ಹೊಂದಿದ್ದಾರೆ. ಇಂತಹ ಪ್ರತಿಕೂಲ ಸನ್ನಿವೇಶದಲ್ಲೇ ಈ ಕಮಿಷನ್ ರಹಿತ ಹೊಸ ಸೇವೆ ಆರಂಭಗೊಂಡಿದೆ.

ಈಗ ನಮ್ಮ ಯಾತ್ರಿ ಆ್ಯಪ್ ನಲ್ಲಿ 45,000 ಆಟೋ ರಿಕ್ಷಾ ಚಾಲಕರು ನೋಂದಾಯಿಸಿದ್ದಾರೆ. ಈ ಯೋಜನೆಯ ಹಿಂದಿರುವ ಸ್ಟಾರ್ಟಪ್ ಸಂಸ್ಥೆ ತನ್ನ ವ್ಯಾಪ್ತಿಯನ್ನು ಇನ್ನೂ ಹೆಚ್ಚು ನಗರಗಳಿಗೆ ವ್ಯಾಪಿಸಿ, ಕ್ಯಾಬ್, ಬಸ್ ಹಾಗೂ ಮೆಟ್ರೋ ರೈಲುಗಳಂತಹ ಸೇವೆಗೆ ಪೂರಕವಾಗಲು ಉದ್ದೇಶಿಸಿದೆ. ಒಎನ್‌ಡಿಸಿಯ ಸಿಇಓ ಥಂಪಿ ಕೋಶಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಅಂದಾಜು 5 ಲಕ್ಷ ಪ್ರಯಾಣಿಕರು ನಮ್ಮ ಯಾತ್ರಿ ಆ್ಯಪ್ ಸೇವೆಯನ್ನು ತಮ್ಮ ಪ್ರಯಾಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

2021ರಲ್ಲಿ ಸ್ಥಾಪನೆಯಾದ ಒಎನ್‌ಡಿಸಿ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ವಾಣಿಜ್ಯ ಹೆಚ್ಚು ಜನರಿಗೆ ತಲುಪುವಂತಾಗಬೇಕು ಎಂಬ ಉದ್ದೇಶದಿಂದ ವಾಣಿಜ್ಯ ಸಚಿವಾಲಯ ಇದಕ್ಕೆ ಬೆಂಬಲ ನೀಡುತ್ತಿದೆ. ಸಂಸ್ಥೆಯ ಮೊಬೈಲ್ ಅಪ್ಲಿಕೇಶನ್ ಅನ್ನು ಓಪನ್ ಸೋರ್ಸ್ ಆಗಿರುವಂತೆ ವಿನ್ಯಾಸಗೊಳಿಸಲಾಗಿದ್ದು, ಡಿಜಿಟಲ್ ಪಾವತಿ ಪೂರೈಕೆದಾರರಾದ ಪೇಟಿಎಂ ಹಾಗೂ ಫೋನ್‌ಪೇ ಸಂಸ್ಥೆಗಳು ಪ್ರಯಾಣಿಕರು ಪಾವತಿ ನಡೆಸುವಂತೆ ಆ್ಯಪ್‌ನಲ್ಲಿ ಅಂತರ್ಗತವಾಗಲು ಸಾಧ್ಯ.

ಇದನ್ನೂ ಓದಿ : ರಾಜಧಾನಿಯಲ್ಲಿ "ನಮ್ಮ‌ ಕ್ಲಿನಿಕ್" ಜೊತೆ ₹ಆಯುಷ್ಮತಿ ಕ್ಲಿನಿಕ್" ತೆರೆಯಲು ಪಾಲಿಕೆ ಸಿದ್ಧತೆ

ಒಎನ್‌ಡಿಸಿ ಆರಂಭದಲ್ಲಿ ವಿವಿಧ ನಗರಗಳಲ್ಲಿ ದಿನಸಿ ಸಾಮಗ್ರಿಗಳು ಮತ್ತು ಹೊಟೆಲ್‌ಗಳಿಂದ ಆಹಾರ ಉತ್ಪನ್ನಗಳನ್ನು ಒದಗಿಸುವ ಸೇವೆ ನೀಡುವ ಮೂಲಕ ಅಭಿವೃದ್ಧಿ ಹೊಂದಿತು. ಆ ಮೂಲಕ ಅದು ಅಮೆಜಾನ್ ಡಾಟ್ ಕಾಮ್ ಹಾಗೂ ವಾಲ್‌ಮಾರ್ಟ್ ಇಂಕ್ ಸಂಸ್ಥೆಯ ಮಾಲೀಕತ್ವದ ಫ್ಲಿಪ್‌ಕಾರ್ಟ್ ಸಂಸ್ಥೆಗಳ ಜೊತೆ ಸ್ಪರ್ಧೆಗೆ ಇಳಿದಿತ್ತು. ಒಎನ್‌ಡಿಸಿಯ ಆಹಾರ ಪೂರೈಕೆ ಸರಪಳಿಯ ಸಹಭಾಗಿಗಳು ಹೊಸಬರಾಗಿದ್ದು, ಸಾಫ್ಟ್ ಬ್ಯಾಂಕ್ ಗ್ರೂಪ್ ಕಾರ್ಪ್ ಬೆಂಬಲ ಹೊಂದಿರುವ ಸ್ವಿಗ್ಗಿ ಸಂಸ್ಥೆಯೊಡನೆ ಮತ್ತು ಟೈಗರ್ ಗ್ಲೋಬಲ್ ಸಂಸ್ಥೆಯ ಬೆಂಬಲ ಹೊಂದಿರುವ ಜೊಮ್ಯಾಟೊ ಲಿಮಿಟೆಡ್ ಸಂಸ್ಥೆಯೊಡನೆ ಸ್ಪರ್ಧಿಸಲಿದೆ.

ಕೋಶಿ ಅವರ ಪ್ರಕಾರ, ಈ ವೇದಿಕೆಯಲ್ಲಿ ಈಗಾಗಲೇ 25,000ಕ್ಕೂ ಹೆಚ್ಚು ಸಹಯೋಗಿಗಳಿದ್ದು, ದಿನಸಿ ಮತ್ತು ಆಹಾರ ಪೂರೈಕೆ ನಡೆಸುತ್ತಿವೆ. ಈಗಾಗಲೇ ಹಲವಾರು ಹೊಟೆಲ್‌ಗಳಿಂದ ಈ ವೇದಿಕೆ ಪ್ರತಿದಿನವೂ ಆಹಾರ ಪೂರೈಕೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಹಣಕಾಸು ಸೇವೆ ಒದಗಿಸುವ ಸಂಸ್ಥೆಗಳನ್ನೂ ಒಳಗೊಳ್ಳಲಿದೆ ಎಂದು ಕೋಶಿ ಹೇಳಿದ್ದಾರೆ.

ಒಎನ್‌ಡಿಸಿ ಈಗಾಗಲೇ ಅಮೆಜಾನ್, ಗೂಗಲ್ ಹಾಗೂ ಫೇಸ್‌ಬುಕ್‌ (ಮೆಟಾ) ಮಾಲಿಕತ್ವದ ವಾಟ್ಸಾಪ್‌ಗಳಿಗೆ ಇದಕ್ಕಾಗಿ ಆಮಂತ್ರಣ ಕಳುಹಿಸಿದ್ದು, ಅವರು ಅದಕ್ಕೆ ಇನ್ನೂ ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News