Suryakumar Yadav: 2022ರ ವರ್ಷವು ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷವಾದ ವರ್ಷವೇನಲ್ಲ. ಈ ವರ್ಷ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ 2022ರಂತಹ ದೊಡ್ಡ ಟೂರ್ನಿಗಳಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. 2022 ರಲ್ಲಿ ತಂಡವು ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗದಿದ್ದರೂ, ಭಾರತೀಯ ಕ್ರಿಕೆಟ್ನ ಸ್ಟಾರ್ ಆಟಗಾರರೊಬ್ಬರು ಈ ವರ್ಷ ದೊಡ್ಡ ದೊಡ್ಡ ದಾಖಲೆಗಳನ್ನು ಮಾಡಿದ್ದಾರೆ. ಈ ಆಟಗಾರ ಬೇರೆ ಯಾರೂ ಅಲ್ಲ. ಟೀಂ ಇಂಡಿಯಾದ ಮಿಸ್ಟರ್ 360 ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್.
ಸೂರ್ಯಕುಮಾರ್ ಯಾದವ್ 2022 ರಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಆಗಿದ್ದರು. ಈ ವರ್ಷ ಅವರು 31 ಇನ್ನಿಂಗ್ಸ್ಗಳಲ್ಲಿ 46.56 ಸರಾಸರಿ ಮತ್ತು 187.43 ಸ್ಟ್ರೈಕ್ ರೇಟ್ನಲ್ಲಿ 1,164 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 9 ಅರ್ಧ ಶತಕ ಮತ್ತು 2 ಶತಕಗಳು ಹೊರಬಂದಿವೆ.
ಸೂರ್ಯಕುಮಾರ್ ಯಾದವ್ ಈ ವರ್ಷ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಉಳಿದಿದ್ದಾರೆ. ಇದರೊಂದಿಗೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಸದ್ಯಕ್ಕೆ ಟಿ20 ಕ್ರಿಕೆಟ್ನಲ್ಲಿ ನಂಬರ್ ಒನ್ ಬ್ಯಾಟ್ಸ್ಮನ್ ಕೂಡ ಆಗಿದ್ದಾರೆ.
ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಶತಕ ಬಾರಿಸಿದ್ದರು. ಸರಣಿಯ ಎರಡನೇ T20 ಪಂದ್ಯದಲ್ಲಿ 51 ಎಸೆತಗಳಲ್ಲಿ 111 ರನ್ಗಳ ಅಜೇಯ ಇನ್ನಿಂಗ್ಸ್ಗಳನ್ನು ಆಡಿದರು. ನ್ಯೂಜಿಲೆಂಡ್ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು.
ಸೂರ್ಯಕುಮಾರ್ ಯಾದವ್ ಅವರು ವಿರಾಟ್ ಕೊಹ್ಲಿಯ ಬಳಿಕ ಒಂದು ವರ್ಷದಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಎನಿಸಿಕೊಂಡ ಆಟಗಾರನಾಗಿದ್ದಾರೆ. ಕೊಹ್ಲಿ 2016 ರಲ್ಲಿ 6 ಬಾರಿ ಪಂದ್ಯಶ್ರೇಷ್ಠರಾಗಿದ್ದಾರೆ. ಆದರೆ ಸೂರ್ಯಕುಮಾರ್ ಈ ವರ್ಷ 7 ಬಾರಿ ಪಂದ್ಯಶ್ರೇಷ್ಠರಾಗಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ. ಈ ವರ್ಷ ಅವರು ಒಟ್ಟು 68 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಮೊದಲು ಈ ದಾಖಲೆ ಮುಹಮ್ಮದ್ ವಾಸಿಂ ಹೆಸರಿನಲ್ಲಿತ್ತು. ಕ್ಯಾಲೆಂಡರ್ ವರ್ಷದಲ್ಲಿ ಅವರು 43 ಸಿಕ್ಸರ್ಗಳನ್ನು ಬಾರಿಸಿದ್ದರು.