ನವದೆಹಲಿ: ಆತಿಥೇಯ ಭಾರತ ದಕ್ಷಿಣ ಆಫ್ರಿಕಾದೊಂದಿಗೆ ಸತತ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಸತತ 11 ದೇಶೀಯ ಟೆಸ್ಟ್ ಸರಣಿಯನ್ನು ಗೆದ್ದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ ವಿಶ್ವ ದಾಖಲೆ ನಿರ್ಮಿಸಿದೆ. ಈ ಮೂಲಕ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದ ಆಸ್ಟ್ರೇಲಿಯಾದ ದಾಖಲೆಯನ್ನು ಭಾರತ ಮುರಿದಿದೆ.
ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಎರಡು ಬಾರಿ ಈ ಸಾಧನೆ ಮಾಡಿತು. ಸರಣಿ ಗೆಲುವುಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ನಂತರದ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಇದೆ. ಅವರು 1975/76 ರಿಂದ 1985/86 ರ ನಡುವೆ ಸತತ ಎಂಟು ಸರಣಿಗಳನ್ನು ಗೆದ್ದಿದ್ದರು.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಪುಣೆಯಲ್ಲಿ ನಡೆಯಿತು. ಐದು ವಿಕೆಟ್ಗಳಿಗೆ 601 ರನ್ ಗಳಿಸುವ ಮೂಲಕ ಭಾರತ ಮೊದಲ ಇನ್ನಿಂಗ್ಸ್ ಘೋಷಿಸಿತು. ಕ್ಯಾಪ್ಟನ್ ವಿರಾಟ್ ಕೊಹ್ಲಿ ಭಾರತ ಪರ ಅಜೇಯ ಇನ್ನಿಂಗ್ಸ್ ಆಡಿದರು. ಇದರ ನಂತರ ಭಾರತದ ಬೌಲರ್ಗಳು ದಕ್ಷಿಣ ಆಫ್ರಿಕಾವನ್ನು ಮೊದಲ ಇನ್ನಿಂಗ್ಸ್ನಲ್ಲಿ 275 ರನ್ಗಳಿಗೆ ಕಟ್ಟಿಹಾಕಿದರು. ಬಳಿಕ ಭಾರತೀಯ ಬೌಲರ್ಗಳು ಕೂಡ ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಫಾಲೋ ಆನ್ ಹೇರಿದ್ದ ಭಾರತ ಭೋಜನ ವಿರಾಮಕ್ಕೂ ಮುನ್ನ 4 ವಿಕೆಟ್ ಕಿತ್ತು ಸಂಪೂರ್ಣ ಹಿಡಿತ ಸಾಧಿಸಿತ್ತು. ಬಳಿಕ ಅಂತಿಮವಾಗಿ 189ಕ್ಕೆ ಆಲ್ಔಟ್ ಮಾಡಿ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಕ್ರಿಕೆಟ್ನಲ್ಲಿ ತನ್ನ ಈವರೆಗಿನ ಬೃಹತ್ ಗೆಲುವನ್ನು ದಾಖಲಿಸಿತು.
ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಅವರು ದಕ್ಷಿಣ ಆಫ್ರಿಕಾವನ್ನು ಒಂದು ಇನ್ನಿಂಗ್ಸ್ ಮತ್ತು 137 ರನ್ಗಳಿಂದ ಸೋಲಿಸಿದರು. ಇದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಅತಿದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾ 2010 ರಲ್ಲಿ ಕೊಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಪಂದ್ಯದಲ್ಲಿ 1 ಇನ್ನಿಂಗ್ಸ್ ಮತ್ತು 57 ರನ್ ಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು.
ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ನಲ್ಲಿ ಭಾರತ ತಂಡ 203 ರನ್ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಪುಣೆಯ ವಿಜಯದೊಂದಿಗೆ, ಇದು ಪ್ರಸ್ತುತ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಭಾರತ ತಂಡ ಈಗ ಈ ಟೆಸ್ಟ್ ಸರಣಿಯನ್ನು ಗೆದ್ದಿದೆ. ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅಕ್ಟೋಬರ್ 19ರಂದು ರಾಂಚಿಯಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯಗಳಿಸಿದರೂ ಅದು ತನ್ನ ಸೋಲಿನ ಅಂತರವನ್ನು ಕಡಿಮೆ ಮಾಡುತ್ತದೆ.