Tejas Mk1A : ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆ ಪ್ರಸ್ತುತ ಅರ್ಜೆಂಟೀನಾ ಮತ್ತು ಈಜಿಪ್ಟ್ಗಳ ಜೊತೆ ತನ್ನ ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ತೇಜಸ್ ಎಂಕೆ1ಎ ಮಾರಾಟದ ಕುರಿತಾಗಿ ಮುಂದುವರಿದ ಹಂತದ ಮಾತುಕತೆಯಲ್ಲಿ ನಿರತವಾಗಿದೆ. ಎಚ್ಎಎಲ್ನ ಪ್ರಭಾರಿ ಅಧ್ಯಕ್ಷರಾದ ಸಿಬಿ ಅನಂತಕೃಷ್ಣನ್ ಅವರು ಏರೋ ಇಂಡಿಯಾ 2023ರ ಸಂದರ್ಭದಲ್ಲಿ ಅರ್ಜೆಂಟೀನಾ ಜೊತೆಗಿನ ಮಾತುಕತೆ ಧನಾತ್ಮಕವಾಗಿ ಮುಂದುವರಿದಿದ್ದು, ಒಂದು ಸಣ್ಣ ಒಪ್ಪಂದ ಶೀಘ್ರದಲ್ಲೇ ನೆರವೇರುವ ನಿರೀಕ್ಷೆಗಳಿವೆ ಎಂದಿದ್ದರು. ಅನಂತಕೃಷ್ಣನ್ ಅವರ ಪ್ರಕಾರ, ಅರ್ಜೆಂಟೀನಾ ಕನಿಷ್ಠ 15 ಎಲ್ಸಿಎಗಳ ಖರೀದಿಗೆ ಆಸಕ್ತಿ ತೋರಿದ್ದು, ಅರ್ಜೆಂಟೀನಾದ ಪೈಲಟ್ಗಳು ಈಗಾಗಲೇ ಭಾರತದಲ್ಲಿ ಯುದ್ಧ ವಿಮಾನವನ್ನು ಪರೀಕ್ಷಿಸಿದ್ದಾರೆ.
ಬಹುತೇಕ ನಿಶ್ಚಯಗೊಂಡಿದೆ ಅರ್ಜೆಂಟೀನಾಗೆ ಎಚ್ಎಎಲ್ನ ತೇಜಸ್ ಎಂಕೆ1ಎ ರಫ್ತು
ಭಾರತ ಸರ್ಕಾರ ಎಚ್ಎಎಲ್ ಜೊತೆ 83 ಎಲ್ಸಿಎ ತೇಜಸ್ ಎಂಕೆ1ಎ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಮೊದಲ ವಿಮಾನದ ಪೂರೈಕೆ 2024ರಲ್ಲಿ ನೆರವೇರುವ ಸಾಧ್ಯತೆಗಳಿವೆ. ಎಚ್ಎಎಲ್ ಈಗಾಗಲೇ ಒಪ್ಪಂದದಲ್ಲಿ ನಿಗದಿಯಾಗಿರುವ ಸಮಯಕ್ಕಿಂತಲೂ ಮೊದಲೇ ವಿಮಾನವನ್ನು ಪೂರೈಸುವ ಕುರಿತು ಕಾರ್ಯ ನಿರ್ವಹಿಸುತ್ತಿದೆ. ಎಚ್ಎಎಲ್ ಎಲ್ಸಿಎ ಎಂಕೆ1ಎ ಹಾಗೂ ಮುಂದಿನ ತೇಜಸ್ ಎಂಕೆ2 ವಿಮಾನಗಳಿಗಾಗಿ ಬಂದಿರುವ ಹೆಚ್ಚಿನ ಆದೇಶಗಳನ್ನು ಪೂರೈಸಲು ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ: ಮನೆಯಲ್ಲಿನ ವೈಫೈ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ? ಇಲ್ಲಿದೆ ಸಿಂಪಲ್ ಉಪಾಯ!
ಎಚ್ಎಎಲ್ ಈಗಾಗಲೇ ಈಜಿಪ್ಟ್ ಜೊತೆ 35 ಎಲ್ಸಿಎ ಎಂಕೆ1ಎ ವಿಮಾನಗಳ ಮಾರಾಟ ಹಾಗೂ ವಿಮಾನಗಳ ನಿರ್ವಹಣೆ, ದುರಸ್ತಿ ಹಾಗೂ ಕೂಲಂಕುಷ ಪರೀಕ್ಷೆ (ಎಂಆರ್ಓ) ಘಟಕವನ್ನು ಈಜಿಪ್ಟ್ನಲ್ಲಿ ಸ್ಥಾಪಿಸಲು ಮಾತುಕತೆ ನಡೆಸುತ್ತಿದೆ. ಈ ಉದ್ದೇಶಿತ ಘಟಕ ಈಜಿಪ್ಟಿನ ದೇಶೀಯ ರಕ್ಷಣಾ ಉದ್ಯಮಕ್ಕೆ ಉತ್ತೇಜನ ನೀಡಲಿದೆ.
ಅರ್ಜೆಂಟೀನಾ ಮತ್ತು ಈಜಿಪ್ಟ್ಗಳನ್ನು ಹೊರತುಪಡಿಸಿ, ಫಿಲಿಪೈನ್ಸ್ ಸಹ ಎಚ್ಎಎಲ್ನಿಂದ ಆರು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ಗಳನ್ನು ಖರೀದಿಸಲಿದೆ ಎಂದು ಅನಂತಕೃಷ್ಣನ್ ಹೇಳಿದ್ದಾರೆ. 2022ರಲ್ಲಿ ಆಸಿಯಾನ್ ಸದಸ್ಯ ರಾಷ್ಟ್ರವಾದ ಫಿಲಿಪೈನ್ಸ್ ಭಾರತದೊಡನೆ ಸೂಪರ್ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಖರೀದಿಗಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು.
ಆದರೆ ಭಾರತ ಸರ್ಕಾರ ಏಳಕ್ಕಿಂತ ಹೆಚ್ಚು ರಾಷ್ಟ್ರಗಳು ಭಾರತದ ದೇಶೀಯ ನಿರ್ಮಾಣದ ಎಲ್ಸಿಎ ತೇಜಸ್ ಖರೀದಿಗೆ ಆಸಕ್ತಿ ತೋರಿವೆ ಎಂದಿದ್ದರೂ, ಎಚ್ಎಎಲ್ ಇನ್ನೂ ಮಲೇಷ್ಯಾದೊಡನೆ ರಪ್ತು ಒಪ್ಪಂದವನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಮಲೇಷ್ಯಾ ಎಚ್ಎಎಲ್ ಅನ್ನು ಪರಿಗಣಿಸಿದ್ದರೂ, ಈಗ ಅದು ಎಚ್ಎಎಲ್ನ ಎಲ್ಸಿಎ ತೇಜಸ್ ಬದಲಿಗೆ ದಕ್ಷಿಣ ಕೊರಿಯಾದ ಕೊರಿಯನ್ ಏರೋಸ್ಪೇಸ್ ಇಂಡಸ್ಟ್ರೀಸ್ (ಕೆಎಐ) ನಿರ್ಮಾಣದ ಎಫ್ಎ-50 ವಿಮಾನವನ್ನು ಖರೀದಿಸಲು ಆಸಕ್ತಿ ತೋರುತ್ತಿದೆ. ಮಲೇಷ್ಯಾದಲ್ಲಿ ಎಚ್ಎಎಲ್ ಜೊತೆ ಚೀನಾ - ಪಾಕಿಸ್ತಾನ ನಿರ್ಮಾಣದ ಜೆಎಫ್-17, ರಷ್ಯಾದ ಯಾಕ್-130, ಹಾಗೂ ಇಟಲಿಯ ಲಿಯೊನಾರ್ಡೊದ ಎಂ-346 ವಿಮಾನಗಳು ಸ್ಪರ್ಧಿಸುತ್ತಿವೆ.
ಮೂಲಗಳ ಪ್ರಕಾರ, ತೇಜಸ್ ಎಂಕೆ1ಎ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಮಲೇಷ್ಯಾದಲ್ಲಿ ಇತರ ಪ್ರತಿಸ್ಪರ್ಧಿ ವಿಮಾನಗಳಿಂದ ಹೆಚ್ಚಾಗಿ ಪರಿಗಣಿಸಲ್ಪಟ್ಟಿತ್ತು. ದಕ್ಷಿಣ ಕೊರಿಯಾದ ಎಫ್ಎ-50 ಎಚ್ಎಎಲ್ ಕೊಟ್ಟಿರುವ ಬೆಲೆಗಿಂತ ಸಾಕಷ್ಟು ಹೆಚ್ಚಿನದಾದರೂ, ಈಗ ಕೆಎಐ ಎಚ್ಎಎಲ್ ಹೇಳಿದ ಬೆಲೆಗೆ ವಿಮಾನ ಒದಗಿಸಲು ಪ್ರಯತ್ನ ನಡೆಸುತ್ತಿದೆ ಎನ್ನುತ್ತವೆ ವರದಿಗಳು.
ಎಚ್ಎಎಲ್ ತೇಜಸ್ ಎಂಕೆ1ಎ ವಿಮಾನಗಳನ್ನು ಅರ್ಜೆಂಟೀನಾಗೆ ಮಾರಾಟ ಮಾಡುವ ಪ್ರಯತ್ನಗಳಿಗೆ ಸತತವಾಗಿ ನಡೆಯುತ್ತಿರುವ ಫಾಕ್ಲ್ಯಾಂಡ್ ದ್ವೀಪದ ಸಮಸ್ಯೆ ಅಡ್ಡಿಯನ್ನು ಉಂಟುಮಾಡಿದೆ. ಪ್ರಸ್ತುತ ಯುನೈಟೆಡ್ ಕಿಂಗ್ಡಮ್ ನಿಯಂತ್ರಣದಲ್ಲಿರುವ ಫಾಕ್ಲ್ಯಾಂಡ್ ದ್ವೀಪವನ್ನು ಅರ್ಜೆಂಟೀನಾ ತನ್ನದು ಎನ್ನುತ್ತಾ ಬಂದಿದೆ. ಯಾವುದೇ ಬ್ರಿಟಿಷ್ ಸಂಸ್ಥೆ ನಿರ್ಮಿಸಿರುವ ಬಿಡಿಭಾಗಗಳನ್ನು ಹೊಂದಿರುವ ಆಯುಧಗಳ ಮಾರಾಟವನ್ನು ನಿಯಂತ್ರಿಸುವ ಯುಕೆ, ವಿವಿಧ ದೇಶಗಳಿಂದ ಆಯುಧ ಖರೀದಿಸುವ ಅರ್ಜೆಂಟೀನಾದ ಪ್ರಯತ್ನಗಳನ್ನು ಸತತವಾಗಿ ತಡೆಯುತ್ತಾ ಬಂದಿದೆ. 2020ರಲ್ಲಿ ನಿರ್ದಿಷ್ಟ ವರದಿಗಳು ಅರ್ಜೆಂಟೀನಾ ಚೀನಾದೊಡನೆ ಒಪ್ಪಂದ ಮಾಡಿಕೊಂಡು, ಜೆಎಫ್-17 ವಿಮಾನಗಳನ್ನು ಖರೀದಿಸಲಿದೆ ಎಂದಿದ್ದವು. ಆದರೆ ಈ ಕುರಿತಾಗಿ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.
ಇದನ್ನೂ ಓದಿ:ಬುಲೆಟ್ ನಷ್ಟೇ ಈ ಕಾರಿನ ಬೆಲೆ ! ಮೈಲೇಜ್ 33 KMಗಿಂತ ಹೆಚ್ಚು
ಎಲ್ಸಿಎ ತೇಜಸ್ ಒಂದು ನಾಲ್ಕನೇ ತಲೆಮಾರಿನ, ಹಗುರವಾದ, ಒಂದು ಇಂಜಿನ್ ಹೊಂದಿರುವ, ಬಹುಪಾತ್ರಗಳ ಯುದ್ಧ ವಿಮಾನವಾಗಿದೆ. ಇದನ್ನು ವಾಯುಯುದ್ಧ, ಗಾಳಿಯಿಂದ ಭೂಮಿಗೆ, ಹಾಗೂ ಗಾಳಿಯಿಂದ ಸಮುದ್ರಕ್ಕೆ ದಾಳಿ ನಡೆಸುವ ಪಾತ್ರಗಳನ್ನು ನಿರ್ವಹಿಸಲು ಅಭಿವೃದ್ಧಿ ಪಡಿಸಲಾಗಿದೆ. ಇದನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಅಭಿವೃದ್ಧಿ ಪಡಿಸಿದ್ದು, ಎಚ್ಎಎಲ್ ಉತ್ಪಾದಿಸುತ್ತಿದೆ. ಎಲ್ಸಿಎ ತೇಜಸ್ ವಿಮಾನ ಈಗಾಗಲೇ ಭಾರತೀಯ ವಾಯುಪಡೆ ಹಾಗೂ ನೌಕಾಪಡೆಗಳಿಗೆ ಸೇರ್ಪಡೆಗೊಂಡಿದೆ.
ತೇಜಸ್ ಎಂಕೆ1ಎ ತೇಜಸ್ ಎಂಕೆ1 ವಿಮಾನದ ಅಭಿವೃದ್ಧಿ ಹೊಂದಿದ ಆವೃತ್ತಿಯಾಗಿದ್ದು, ಗಾಳಿಯಲ್ಲೇ ಇಂಧನ ಮರು ಪೂರೈಕೆ, ಆಧುನಿಕ ಏವಿಯಾನಿಕ್ಸ್, ಹಾಗೂ ಇಲೆಕ್ಟ್ರಾನಿಕ್ ವಾರ್ಫೇರ್ ಸೂಟ್ಗಳನ್ನು ಹೊಂದಿದೆ.ಇದರಲ್ಲಿ ಆಧುನಿಕ ಆಯುಧ ವ್ಯವಸ್ಥೆಗಳಿದ್ದು, ಕ್ಷಿಪಣಿಗಳು, ಬಾಂಬ್ಗಳು, ಗನ್ಗಳು, ಇತ್ಯಾದಿಗಳಿದ್ದು, ಕಾರ್ಯಾಚರಣೆಗಳಲ್ಲಿ ಪೈಲಟ್ ಮೇಲಿನ ಕೆಲಸದ ಹೊರೆಯನ್ನು ಕಡಿಮೆಗೊಳಿಸುತ್ತವೆ. ತೇಜಸ್ ಎಂಕೆ1ಎನಲ್ಲಿ ಆ್ಯಕ್ಟಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ (ಎಇಎಸ್ಎ) ರೇಡಾರ್ ವ್ಯವಸ್ಥೆಯಿದ್ದು, ಇದು ಹೆಚ್ಚಿನ ಪರಿಸ್ಥಿತಿಯ ಅರಿವು ಹಾಗೂ ಗುರಿಯನ್ನು ಹಿಂಬಾಲಿಸುವ ಸಾಮರ್ಥ್ಯ ಒದಗಿಸುತ್ತದೆ.
ಅಡೆತಡೆಗಳನ್ನು ಮೀರಿ: ದೇಶೀಯ ತೇಜಸ್ ಎಂಕೆ1ಎ ಉತ್ಪಾದನೆಯಲ್ಲಿ ಎಚ್ಎಎಲ್ನ ಹಾದಿ
ಎಚ್ಎಎಲ್ ಈಗಾಗಲೇ ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಅಗತ್ಯಗಳಿಗೆ ತಕ್ಕಂತೆ ತೇಜಸ್ ಎಂಕೆ1ಎ ವಿಮಾನದ ಉತ್ಪಾದನೆಯ ದರವನ್ನು ಹೆಚ್ಚಿಸಲು ಕಾರ್ಯಾಚರಿಸುತ್ತಿದೆ. ಪ್ರಸ್ತುತ ಎಚ್ಎಎಲ್ ವರ್ಷಕ್ಕೆ 8-10 ವಿಮಾನಗಳನ್ನು ಉತ್ಪಾದಿಸುತ್ತಿದೆ. ಆದರೆ ಎಚ್ಎಎಲ್ ಈ ಸಂಖ್ಯೆಯನ್ನು ವರ್ಷಕ್ಕೆ 16 ವಿಮಾನಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಿದೆ. ಭಾರತ ಸರ್ಕಾರವೂ 83 ತೇಜಸ್ ಎಂಕೆ1ಎ ವಿಮಾನಗಳ ಖರೀದಿಗೆ ಹಸಿರು ನಿಶಾನೆ ತೋರಿದ್ದು, ಇದು ಎಚ್ಎಎಲ್ನ ಉತ್ಪಾದನಾ ಸಾಮರ್ಥ್ಯಕ್ಕೆ ಉತ್ತೇಜನ ನೀಡಲಿದೆ.
ಆದರೆ ಎಚ್ಎಎಲ್ ತೇಜಸ್ ಎಂಕೆ1ಎ ವಿಮಾನದ ಉತ್ಪಾದನೆ ಹೆಚ್ಚಿಸುವಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಅವುಗಳಲ್ಲಿ ಪ್ರಮುಖ ಸವಾಲೆಂದರೆ ಇಂಜಿನ್, ಏವಿಯಾನಿಕ್ಸ್ನಂತಹ ಅಗತ್ಯ ಉಪಕರಣಗಳ ಸೀಮಿತ ಪ್ರಮಾಣದ ಪೂರೈಕೆ. ಈ ಬಿಡಿಭಾಗಗಳು ಹಾಗೂ ಉತ್ಪನ್ನಗಳನ್ನು ಎಚ್ಎಎಲ್ ವಿದೇಶೀ ಪೂರೈಕೆದಾರರಿಂದ ಪಡೆಯುತ್ತಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಎಚ್ಎಎಲ್ ಈ ಉತ್ಪನ್ನಗಳ ಕಾವೇರಿ ಇಂಜಿನ್ನಂತಹ ದೇಶೀಯ ಬದಲಿ ವ್ಯವಸ್ಥೆಗಳನ್ನು ಉತ್ಪಾದಿಸಲು ಪ್ರಯತ್ನ ನಡೆಸುತ್ತಿದೆ. ಆದರೆ ಕಾವೇರಿ ಇಂಜಿನ್ ಕಳೆದ ಮೂರು ದಶಕಗಳಿಂದಲೂ ಅಭಿವೃದ್ಧಿ ಹಂತದಲ್ಲೇ ಇದೆ. ಇದರೊಡನೆ, ಎಚ್ಎಎಲ್ ವಿದೇಶೀ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ತನ್ನ ದೇಶೀಯ ಪೂರೈಕೆದಾರರ ಜಾಲವನ್ನು ಅಭಿವೃದ್ಧಿ ಪಡಿಸುತ್ತಿದೆ.
ಇದನ್ನೂ ಓದಿ:Coming Soon: ಎರಡಲ್ಲ ಒಟ್ಟು 4 ಹೊಸ ಕಾರು ಬಿಡುಗಡೆಗೆ ಸಿದ್ಧವಾಗಿದೆ ಈ ಭಾರತೀಯ ಕಂಪನಿ!
ಎಚ್ಎಎಲ್ ಮುಂದಿರುವ ಇನ್ನೊಂದು ಸವಾಲೆಂದರೆ, ಅದು ಉತ್ಪಾದನಾ ಪ್ರಕ್ರಿಯೆಯಲ್ಲಿ ತನ್ನ ದಕ್ಷತೆಯನ್ನು ಹೆಚ್ಚಿಸುವುದು. ಇದನ್ನು ಸಾಧಿಸಲು, ಎಚ್ಎಎಲ್ ಹಲವು ಕ್ರಮಗಳನ್ನು ಜಾರಿಗೆ ತಂದಿದೆ. ಉತ್ಪಾದನಾ ಪ್ರಕ್ರಿಯೆಯನ್ನು ಹೆಚ್ಚಿಸಲು ಡಿಜಿಟಲ್ ತಂತ್ರಜ್ಞಾನದ ಬಳಕೆ, ಲೀನ್ ಉತ್ಪಾದನಾ ತಂತ್ರಗಳ ಅನುಷ್ಠಾನ ಅವುಗಳಲ್ಲಿ ಸೇರಿವೆ. ಎಚ್ಎಎಲ್ ತೇಜಸ್ ಎಂಕೆ1ಎ ಉತ್ಪಾದನೆಗೆ ನೆರವಾಗಲು ನೂತನ ಉತ್ಪಾದನಾ ಘಟಕಗಳನ್ನು ಅಭಿವೃದ್ಧಿ ಪಡಿಸುತ್ತಿದೆ.
ಭಾರತೀಯ ವಾಯುಪಡೆಯ ಅಗತ್ಯಗಳನ್ನು ಪೂರೈಸುವುದರ ಜೊತೆಗೆ, ಎಚ್ಎಎಲ್ ತೇಜಸ್ ಎಂಕೆ1ಎ ವಿಮಾನಗಳನ್ನು ಇತರ ದೇಶಗಳಿಗೂ ರಫ್ತು ಮಾಡಲು ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ತೇಜಸ್ ಎಂಕೆ1ಎ ವಿಮಾನಗಳ ಖರೀದಿಗೆ ಮಲೇಷ್ಯಾ, ಈಜಿಪ್ಟ್, ಹಾಗೂ ಅರ್ಜೆಂಟೀನಾಗಳಂತಹ ರಾಷ್ಟ್ರಗಳು ಆಸಕ್ತಿ ತೋರಿವೆ. ಎಚ್ಎಎಲ್ ತನ್ನ ತೇಜಸ್ ಎಂಕೆ1ಎ ವಿಮಾನದ ರಫ್ತಿಗೆ ಅಗತ್ಯವಿರುವ ಪ್ರಮಾಣಪತ್ರದ ಕಾರ್ಯಗಳನ್ನು ನಿರ್ವಹಿಸುತ್ತಿದೆ.
ಇದನ್ನೂ ಓದಿ:ಏರೋ ಇಂಡಿಯಾ 2023ರಲ್ಲಿ ಗಮನ ಸೆಳೆದ ಎಫ್-35: ಬಹುಪಾತ್ರಗಳ ಯುದ್ಧ ವಿಮಾನ ಗುತ್ತಿಗೆಯ ಪರಿಣಾಮಗಳು
ತೇಜಸ್ ಎಂಕೆ1ಎ ಭಾರತದ ಏರೋಸ್ಪೇಸ್ ಉದ್ಯಮದ ಸಾಧನೆಯನ್ನು ಪ್ರತಿನಿಧಿಸುತ್ತದೆ. ಈ ಯುದ್ಧ ವಿಮಾನದ ಆಧುನಿಕ ಸಾಮರ್ಥ್ಯಗಳು ಹಾಗೂ ದೇಶೀಯ ವಿನ್ಯಾಸ ಹಾಗೂ ಉತ್ಪಾದನೆ ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಾವೀಣ್ಯತೆಯನ್ನು ಸಾಬೀತುಪಡಿಸುತ್ತಿವೆ. ಎಚ್ಎಎಲ್ ತೇಜಸ್ ಎಂಕೆ1ಎ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದು ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯಕ್ಕೆ ಉತ್ತೇಜನ ನೀಡಿ, ಜಾಗತಿಕ ಏರೋಸ್ಪೇಸ್ ಉದ್ಯಮದಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.