ನವದೆಹಲಿ: ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಉಪಗ್ರಹಗಳನ್ನು ಪತ್ತೆಹಚ್ಚಲು ಸಾಧ್ಯವಾಗುವ ಚೀನಾ ಹಡಗು ಶ್ರೀಲಂಕಾ ಬಂದರಿನತ್ತ ಸಾಗುತ್ತಿರುವುದು ಈಗ ಭಾರತದಲ್ಲಿ ಭದ್ರತಾ ಕಳವಳವನ್ನು ಹೆಚ್ಚಿಸಿದೆ.ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿ ಹಿನ್ನೆಲೆಯಲ್ಲಿ ಈಗ ಚೀನಾ ತೈವಾನ್ ಕರಾವಳಿಯುದ್ಧಕ್ಕೂ ಮಿಲಿಟರಿ ಪಡೆಯನ್ನು ಹೆಚ್ಚಿಸುತ್ತಿದೆ.
ಯುವಾನ್ ವಾಂಗ್ ಕ್ಲಾಸ್ ಎನ್ನುವ ಹಡಗು ಆಗಸ್ಟ್ 11 ಅಥವಾ 12 ರಂದು ಹಂಬಂಟೋಟ ಬಂದರಿನಲ್ಲಿ ತಂಗಲಿದೆ ಎನ್ನಲಾಗುತ್ತಿದೆ, ಈ ಹಡಗು ಪ್ರಮುಖವಾಗಿ ಉಪಗ್ರಹಗಳು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಟ್ರ್ಯಾಕ್ ಮಾಡುತ್ತದೆ. 400 ಸಿಬ್ಬಂದಿಯನ್ನು ಒಳಗೊಂಡಿರುವ ಹಡಗಿನಲ್ಲಿ ಬೃಹತ್ ಪ್ಯಾರಾಬೋಲಿಕ್ ಟ್ರ್ಯಾಕಿಂಗ್ ಆಂಟೆನಾ ಮತ್ತು ವಿವಿಧ ಸಂವೇದಕಗಳನ್ನು ಅಳವಡಿಸಲಾಗಿದೆ.
ಹಿಂದೂ ಮಹಾಸಾಗರದ ಭಾಗಗಳಲ್ಲಿ ನಿಯೋಜಿಸಿದರೆ, ಹಡಗು ಒಡಿಶಾದ ಕರಾವಳಿಯ ವೀಲರ್ ದ್ವೀಪದಿಂದ ಭಾರತದ ಕ್ಷಿಪಣಿ ಪರೀಕ್ಷೆಗಳನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ.ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಳನ್ನು ಪತ್ತೆಹಚ್ಚುವ ಮೂಲಕ, ಚೀನಾವು ಕ್ಷಿಪಣಿಗಳ ಕಾರ್ಯಕ್ಷಮತೆ ಮತ್ತು ಅವುಗಳ ನಿಖರ ವ್ಯಾಪ್ತಿಯ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ.
ಈಗ ಬೆಳವಣಿಗೆ ಕುರಿತಾಗಿ ಪ್ರತಿಕ್ರಿಯಿಸಿರುವ ಶ್ರೀಲಂಕಾ ಇದು ಪರಮಾಣು ಅಲ್ಲದ ವೇದಿಕೆಯಾಗಿರುವುದರಿಂದ ಹಡಗನ್ನು ತಂಗಳು ಅವಕಾಶ ಕಲ್ಪಿಸುವುದಾಗಿ ಹೇಳಿದೆ."ಹಿಂದೂ ಮಹಾಸಾಗರದಲ್ಲಿ ಕಣ್ಗಾವಲು ಮತ್ತು ಸಂಚರಣೆಗಾಗಿ ಹಡಗನ್ನು ಕಳುಹಿಸುತ್ತಿರುವುದಾಗಿ ಚೀನಾ ನಮಗೆ ತಿಳಿಸಿದೆ" ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ಮಾಧ್ಯಮ ವಕ್ತಾರ ಕರ್ನಲ್ ನಲಿನ್ ಹೆರಾತ್ ಹೇಳಿದ್ದಾರೆ.
ಇದನ್ನೂ ಓದಿ: Rishi Sunak Wife: ಬ್ರಿಟನ್ ರಾಣಿಗಿಂತ ಶ್ರೀಮಂತೆ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ!
ಚೀನಾದ ಈ ಬೆಳವಣಿಗೆಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಭಾರತವು ತನ್ನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲಿನ ಪರಿಣಾಮಗಳ ವಿಚಾರವಾಗಿ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಮತ್ತು ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ" ಎಂದು ಭಾರತ ಸ್ಪಷ್ಟಪಡಿಸಿದೆ.
ಯುವಾನ್ ವಾಂಗ್ ಈಗ ತೀವ್ರ ಚಟುವಟಿಕೆಯಿಂದ ಕೂಡಿರುವ ಜಲಸಂಧಿಯನ್ನು ತಪ್ಪಿಸಿ ಇಂಡೋನೇಷಿಯಾದ ಇತರ ಜಲಸಂಧಿಗಳ ಮೂಲಕ ಹಿಂದೂ ಮಹಾಸಾಗರವನ್ನು ಪ್ರವೇಶಿಸಲಿದೆ ಎನ್ನಲಾಗಿದೆ.ಈ ಹಡಗನ್ನು ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ನಿಯಂತ್ರಿಸುತ್ತಿದ್ದು, ಸಾಕಷ್ಟು ಆಧುನಿಕ ಮಾರ್ಪಾಡುಗಳನ್ನು ಈ ಹಡುಗು ಹೊಂದಿದೆ.
ಈಗಾಗಲೇ $1.4-ಬಿಲಿಯನ್ ಹಣಕಾಸಿನ ನೆರವಿನಿಂದಾಗಿ ಶ್ರೀಲಂಕಾದ ಹಂಬಂಟೋಟಾ ಬಂದರಿನ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಿದೆ.ಈಗ ಚೀನಾ ಅದನ್ನು ತನ್ನ ಮಿಲಿಟರಿ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿರುವ ನಡೆಯನ್ನು ಭಾರತ ಸಂಶಯಾಸ್ಪದವಾಗಿ ನೋಡುತ್ತಿದೆ.
ಇದನ್ನೂ ಓದಿ: ಯುಎಸ್‌ನ ಇಂಡಿಯಾನಾ ಮಾಲ್‌ನಲ್ಲಿ ಗುಂಡಿನ ದಾಳಿ, 4 ಜನರ ದುರ್ಮರಣ
ಶ್ರೀಲಂಕಾ ಈಗಾಗಲೇ ತನ್ನ ಸಾಲದ ಮರುಪಾವತಿಯನ್ನು ಮಾಡದೆ ಇರುವುದರಿಂದಾಗಿ 2017 ರಲ್ಲಿ ಮುಖ್ಯ ಪೂರ್ವ-ಪಶ್ಚಿಮ ಅಂತರಾಷ್ಟ್ರೀಯ ಹಡಗು ಮಾರ್ಗಗಳ ಉದ್ದಕ್ಕೂ ಇರುವ ಬಂದರಿನ ಮೇಲೆ 99 ವರ್ಷಗಳ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಿತು. ಶ್ರೀಲಂಕಾವು ಏಪ್ರಿಲ್‌ನಲ್ಲಿ ಸುಮಾರು $51 ಶತಕೋಟಿ ವಿದೇಶಿ ಸಾಲಗಳನ್ನು ಹೊಂದಿದ್ದು, ಇದಕ್ಕಾಗಿ ಚೀನಾ ಹಾಗೂ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಹಣಕಾಸಿನ ನೆರವು ಕೋರಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.