ನವದೆಹಲಿ: ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿ.ಆರ್.ಐ ) ಯೋಜನೆಯನ್ನು ಭಾರತ ಕಾಪಿ ಮಾಡಲಿದೆಯೇ ಎನ್ನುವ ಊಹಾಪೋಹಗಳನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ನಿರಾಕರಿಸಿದ್ದಾರೆ. ಈ ಯೋಜನೆಯ ಬಗ್ಗೆ ಭಾರತದ ದೀರ್ಘಕಾಲದ ನಿಲುವನ್ನು ಅವರು ಮತ್ತೆ ಪುನರುಚ್ಚರಿಸಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯಲ್ಲಿ (ಡಬ್ಲ್ಯುಇಎಫ್) ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್ 'ನಾವು ನಾವೇ, ನಾವು ಬೇರೆ ದೇಶಗಳಂತಲ್ಲ. ಈ ಉಪಕ್ರಮದಲ್ಲಿ ಮಾತ್ರ ಇದು ಚಾಲ್ತಿಯಲಿಲ್ಲ, ಇದು ಹಲವಾರು ಕ್ಷೇತ್ರಗಳಲ್ಲಿದೆ. ನನ್ನ ಅರ್ಥೈಸುವಿಕೆಯಲ್ಲಿ ಹೇಳುವಂತೆ ಭಾರತವು ದೊಡ್ಡದಾಗುತ್ತಿದ್ದಂತೆ, ಇತರ ದೇಶಗಳಿಗಾಗಿ ಅಭಿವೃದ್ಧಿಪಡಿಸಿದ ಪರಿಕಲ್ಪನೆಗಳು ನಮಗೆ ಅನ್ವಯಿಸುವುದಿಲ್ಲ. ನಮಗೆ ಇತರ ದೇಶಗಳ ಮಾದರಿಯನ್ನು ನಕಲಿಸುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.
'ನಾವು ಅದರ ಬಗ್ಗೆ ದೀರ್ಘಕಾಲದ ನಿಲುವನ್ನು ಹೊಂದಿದ್ದೇವೆ. ಇದು ಸಾರ್ವಭೌಮ ವಿಷಯಗಳೊಂದಿಗೆ ಸಂಪರ್ಕ ಹೊಂದಿದೆ. ಆದ್ದರಿಂದ ನಮ್ಮ ನಿಲುವು ಬದಲಾಗಿಲ್ಲ' ಎಂದು ಹೇಳಿದರು. ಕಳೆದ ತಿಂಗಳು ಜೈಶಂಕರ್ ಅವರು ಬಿಆರ್ಐ ಬಗ್ಗೆ ಭಾರತದ ನಿಲುವಿನ ಬಗ್ಗೆ ಮರು ಯೋಚನೆ ಮಾಡುವುದಿಲ್ಲ ಎಂದು ಹೇಳಿದ್ದರು.ಪ್ರಾದೇಶಿಕ ಸಮಗ್ರತೆಯ ಕುರಿತಾದ ಪ್ರಮುಖ ಕಾಳಜಿಯನ್ನು ನಿರ್ಲಕ್ಷಿಸುವ ಯೋಜನೆಯನ್ನು ಯಾವುದೇ ದೇಶವು ಒಪ್ಪಿಕೊಳ್ಳುವುದಿಲ್ಲ ಎಂದು ಭಾರತ ಈ ಹಿಂದೆ ಹೇಳಿರುವುದನ್ನು ಸಚಿವರು ಮತ್ತೆ ಪುನರುಚ್ಚರಿಸಿದರು.