ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಅಂಬರೀಶ್ ಇನ್ನಿಲ್ಲವಾದರೂ ಅವರು ಅಭಿನಯಿಸಿದ ಕಡೆಯ ಚಿತ್ರ 'ಅಂಬಿ ನಿಂಗ್ ವಯಸ್ಸಾಯ್ತೋ...' ನಿಜಕ್ಕೂ ಎಲ್ಲರ ಮನದಲ್ಲೂ ಮನೆ ಮಾಡಿದೆ.
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ 'ನಾಗರಹಾವು' ಚಿತ್ರದ ಪುಟ್ಟ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಂಬರೀಶ್ ಬಳಿಕ ಖ್ಯಾತಿಯ ಉತ್ತುಂಗಕ್ಕೇರಿದ್ದು ಈಗ ಇತಿಹಾಸ. ಚಿತ್ರರಂಗ ಮಾತ್ರವಲ್ಲದೆ ರಾಜಕಾರಣದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದ ಅಂಬರೀಶ್ ಈವರೆಗೆ 200ಕ್ಕೂ ಹೆಚ್ಚು ಚಿತ್ರಗಳನ್ನು ಅಭಿನಯಿಸಿದ್ದರೂ, ಮತ್ತಷ್ಟು ಉತ್ತಮ ಪಾತ್ರಗಳನ್ನು ಮಾಡಬೇಕೆಂಬ ಚಡಪಡಿಕೆ ಅವರನ್ನು ಕಾಡಿತ್ತು. ಈ ಚಡಪಡಿಕೆ, ಉತ್ಸಾಹದ ಫಲವೇ 'ಅಂಬಿ ನಿಂಗ್ ವಯಸ್ಸಾಯ್ತೋ..' ಚಿತ್ರ!
ಈ ಬಗ್ಗೆ ಅಂಬರೀಶ್ ಅವರೇ ಹೇಳಿಕೊಂಡಿದ್ದು, "ಈಗಾಗಲೇ ಸಾಕಷ್ಟು ಪಾತ್ರಗಳನ್ನು ಮಾಡಿದ್ದೇನೆ. ಆದರೂ ಒಳ್ಳೆ ಪಾತ್ರಗಳನ್ನೂ ಮಾಡುವ ಚಡಪಡಿಕೆ... ವಯಸ್ಸಿಗೆ ಒಪ್ಪುವ ಪರಿಪೂರ್ಣ ಪಾತ್ರಗಳನ್ನು ಮಾಡುವ ಚಡಪಡಿಕೆ ಬಿಡಲೇ ಇಲ್ಲ ಎಂದಿದ್ದರು. ಅಷ್ಟೇ ಅಲ್ಲದೆ, ಇದೇ ಸಂದರ್ಭದಲ್ಲಿ ಅಂಬರೀಶ್, ನನಗಿನ್ನು ವಯಸ್ಸಾಗಿಲ್ಲವೆಂದು ತಮಾಷೆ ಕೂಡ ಮಾಡಿದ್ದರು.
ಇದುವರೆಗೂ ಅಂಬರೀಶ್ ಅಭಿನಯದ ಪ್ರತಿಯೊಂದು ಚಿತ್ರವೂ ವಿಭಿನ್ನವಾಗಿದ್ದು, ಅವರ ಅಭಿನಯದ ಕಡೆಯ ಚಿತ್ರ 'ಅಂಬಿ ನಿಂಗ್ ವಯಸ್ಸಾಯ್ತೋ' ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಹೊಸ ವರ್ಚಸ್ಸು ತಂದುಕೊಟ್ಟಿತ್ತು. ಸುಮಾರು 14 ವರ್ಷಗಳ ಬ್ರೇಕ್ ಬಳಿಕ ಅಂಬಿ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಚಿತ್ರದಲ್ಲಿ ರಾಜಾ ಮೀಸೆಯಲ್ಲಿ ಹಳೆಯ ಬುಲೆಟ್ ಹತ್ತಿ ಹೊರಡುವ ಅಂಬಿ ಲುಕ್, ಅವರಲ್ಲಿ ನವ ಚೈತನ್ಯ ಮೂಡಿಸಿತ್ತು. ನಟ ಕಿಚ್ಚ ಸುದೀಪ್ ಅಂಬರೀಶ್ ಅವರಿಗೆ ಈ ಚಿತ್ರದಲ್ಲಿ ಸಾಥ್ ನೀಡಿದ್ದರು.
ಇನ್ನು, ಈ ಹಿಂದೆ ಅನಾರೋಗ್ಯವಿದ್ದರೂ, ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡ ಅಂಬರೀಶ್ ಅವರು ಆಂಬುಲೆನ್ಸ್ ನಲ್ಲೇ ಕಲಾವಿದರ ಸಂಘಕ್ಕೆ ಬಂದು ಚಿತ್ರ ವೀಕ್ಷಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದ ಅಂಬಿ, "14 ವರ್ಷಗಳ ನಂತರ ನಾನು ಅಭಿನಯಿಸಿದ ಇಡೀ ಸಿನಿಮಾ ನೋಡಿದೆ. ತುಂಬಾನೆ ಖುಷಿ ಆಗಿದೆ. ಸಿನಿಮಾ ನೋಡುತ್ತಲೇ ನನ್ನೊಳಗೆ ನಾನು ಭಾವುಕನಾದೆ. ಚಿತ್ರದಲ್ಲಿನ ಅಷ್ಟೂ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ. ಸಿನಿಮಾ ನೋಡಲೇಬೇಕು ಅಂತ ಅನಿಸುತ್ತಿತ್ತು. ಹಾಗಾಗಿ ಆಂಬುಲೆನ್ಸ್ ನಲ್ಲೆ ಬಂದು ನೋಡಿದೆ" ಎಂದಿದ್ದರು.