ನವದೆಹಲಿ: ದೇಶದ ಹಲವೆಡೆ ಮಂಗಳವಾರ ತಡ ರಾತ್ರಿ ಬೀಸಿದ ಬಾರೀ ಚಂಡಮಾರುತ-ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ 39 ಮಂದಿ ಬಲಿಯಾಗಿದ್ದಾರೆ.
ಚಂಡಮಾರುತ-ಬಿರುಗಾಳಿ ಸಹಿತ ಬಿದ್ದ ಆಲಿಕಲ್ಲು ಮಳೆಯಿಂದಾಗಿ ರಾಜಸ್ಥಾನದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಮಧ್ಯಪ್ರದೇಶದಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ವರದಿಯ ಪ್ರಕಾರ ದೇಶಾದ್ಯಂತ 39 ಜನ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಬುಧವಾರವೂ ಸಹ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ನ ಸಾಬರ್ ಕಾಂಠದಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಗೆ ಹಾಕಿದ್ದ ಶಾಮಿಯಾನ ಸಹ ಬಿರುಗಾಳಿಯಿಂದಾಗಿ ನೆಲಕ್ಕುರುಳಿದೆ. ಈ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಬಿಜೆಪಿ ನಾಯಕರು, ಬಿರುಗಾಳಿಯಿಂದಾಗಿ ಟೆಂಟ್ ನ ಕೆಲ ಭಾಗ ಹಾರಿಹೋಗಿದ್ದು, ಮತ್ತೊಂದೆಡೆ ನೆಲಕ್ಕುರುಳಿದೆ. ಈ ಸಂದರ್ಭದಲ್ಲಿ ರಾಜ್ಯ ಗೃಹ ಸಚಿವ ಪ್ರದೀಪ್ ಸಿಂಗ್ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.
ಮಧ್ಯಪ್ರದೇಶ ಮತ್ತು ಗುಜರಾತಿನಲ್ಲಿಯೂ ಬಿರುಗಾಳಿ ಸಹಿತ ಮಳೆಯಿಂದಾಗಿ ಅಹಲಾವ್ರು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದ ಇಂದೋರ್ನಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಇದೇ ವೇಳೆ ಜಾರ್ಖಂಡ್ ನಲ್ಲಿ 9 ಮಂದಿ, ರಾಜಸ್ಥಾನದಲ್ಲಿ 20 ಮಂದಿ ಗಾಯಗೊಂಡಿದ್ದಾರೆ.