ಚೆನ್ನೈ: ತಮಿಳುನಾಡು ವಿಧಾನಸಭೆಯ ವಿಶ್ವಾಸ ಮತ ಯಾಚನೆಗೆ ತಡೆ ಒಡ್ಡಿದ್ದ ಮದ್ರಾಸ್ ಹೈಕೋರ್ಟ್, ತಡೆ ಆದೇಶವನ್ನು ವಿಸ್ತರಿಸಿದೆ. ಜೊತೆಗೆ ಎಐಎಡಿಎಂಕೆಯ 18 ಶಾಸಕರ ಅಮಾನತು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ. ಇದರಿಂದಾಗಿ ಹೈಕೋರ್ಟ್ ಮೊರೆ ಹೋಗಿದ್ದ ಬಂಡಾಯ ಶಾಸಕರಿಗೆ ತೀವ್ರ ಹಿನ್ನೆಡೆ ಉಂಟಾಗಿದೆ.
ಮುಂದಿನ ಆದೇಶದವರೆಗೆ ತಮಿಳುನಾಡಿನಲ್ಲಿ ಬಹುಮತ ಸಾಬೀತು ಪಡಿಸುವಂತಿಲ್ಲ ಎಂದು ಹೈಕೋರ್ಟ್ ಸೂಚಿಸಿರುವುದರಿಂದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸದ್ಯಕ್ಕೆ ಪಾರಾದಂತಾಗಿದೆ.
ಎಐಎಡಿಎಂಕೆ ಪ್ರಧಾನ ಉಪ ಕಾರ್ಯದರ್ಶಿಯಾಗಿದ್ದ ಟಿಟಿವಿ ದಿನಕರನ್ ಗೆ ನಿಷ್ಠರಾಗಿದ್ದ ಹಾಗೂ ಸಿಎಂ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದ ಮತ್ತು ಕಲಾಪಕ್ಕೆ ಅಡ್ಡಿ ಪಡಿಸುತ್ತಿದ್ದ, 18 ಶಾಸಕರನ್ನು ವಜಾಗೊಳಿಸಿ ತಮಿಳುನಾಡು ಅಸೆಂಬ್ಲಿ ಸೆ.18 ರಂದು ಆದೇಶ ಹೊರಡಿಸಿತ್ತು. ತಮಿಳುನಾಡಿನ ವಿಧಾನಸಭಾ ಸ್ಪೀಕರ್ ಪಿ.ಧನಪಾಲ್ ಈ ಆದೇಶವನ್ನು ಹೊರಡಿಸಿದ್ದರು.
ಆದೇಶವನ್ನು ಪ್ರಶ್ನಿಸಿ ಬಂಡಾಯ ಶಾಸಕರಾದ ಪಿ. ವೆಟ್ರಿವೇಲ್ ಹಾಗೂ ಸಂಘಡಿಗರು ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ದುರೈಸ್ವಾಮಿ ಅವರ ಪೀಠವು ವಿಚಾರಣೆಯನ್ನು ಅಕ್ಟೋಬರ್ 4ರವರೆಗೆ ಮುಂದೂಡಿದೆ.