ಲಕ್ನೋ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಭಾರೀ ಸಿದ್ಧತೆ ನಡೆಸಿದ್ದು, ಪಕ್ಷದ ಮುಖ್ಯಸ್ಥರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿವೆ. ಎಸ್ಪಿ-ಬಿಎಸ್ಪಿ-ಆರ್ ಎಲ್ ಡಿ ಮೈತ್ರಿಕೂಟದಲ್ಲಿ ಸ್ಥಾನವಿಲ್ಲದ ಬಳಿಕ, ಕಾಂಗ್ರೆಸ್ ರಾಜಕೀಯದಲ್ಲಿ ಸಕ್ರಿಯವಾಗಲು ಪ್ರಿಯಾಂಕಾ ಗಾಂಧಿಗೆ ಅವಕಾಶ ಮಾಡಿಕೊಟ್ಟಿದೆ. ಈ ಬೆನ್ನಲೇ ದೇಶದ ಮುಂದಿನ ಪ್ರಧಾನಿ ಅಖಿಲೇಶ್ ಯಾದವ್ ಎಂಬ ಕಟೌಟ್ ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ರಾರಾಜಿಸತೊಡಗಿದೆ.
ನಗರದ ವಿಕ್ರಮಾದಿತ್ಯ ರಸ್ತೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಮಾಜವಾದಿ ಪಕ್ಷದ ಪೋಸ್ಟರ್, ಬ್ಯಾನರ್, ಕಟೌಟ್'ಗಳಲ್ಲಿ ಅಖಿಲೇಶ್ ಯಾದವ್ ಫೋಟೋ ಬಳಸಲಾಗಿದೆ. ಅಷ್ಟೇ ಅಲ್ಲದೆ, ಫೋಟೋ ಕೆಳಗೆ, "ದೇಶದಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಬಗ್ಗೆ ವಿಶ್ವಾಸವಿದೆ. ದೇಶಕ್ಕೆ ಈ ನೂತನ ಪ್ರಧಾನಿ ಅವಶ್ಯಕತೆಯಿದೆ" ಎಂದು ಬರೆಯಲಾಗಿದೆ.
ಈ ಹಿಂದೆ ಬಿಎಸ್ಪಿ-ಎಸ್ಪಿ ಮೈತ್ರಿ ಘೋಷಣೆ ಸಂದರ್ಭದಲ್ಲಿ ಮಾಯಾವತಿ ಅವರು ಪ್ರಧಾನಿ ಅಭ್ಯರ್ಥಿಯಾಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅಖಿಲೇಶ್ ಯಾದವ್, ನೂತನ ವರ್ಷಕ್ಕೆ ನೂತನ ಪ್ರಧಾನಿ ಅಗತ್ಯವಿದೆ ಎಂದು ಹೇಳುತ್ತಾ ಮುಂದಿನ ಪ್ರಧಾನಿ ಉತ್ತರಪ್ರದೇಶದವರೇ ಆಗಿರುತ್ತಾರೆ ಎಂದು ಬಹಳ ರಾಜತಾಂತ್ರಿಕವಾಗಿ ಪ್ರತ್ಯುತ್ತರ ನೀಡಿದ್ದರು.