ನವದೆಹಲಿ: ಮಹಾರಾಷ್ಟ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 21 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಕೊನೆಯ ದಿನದ ಪ್ರಚಾರ ಕಾರ್ಯಕ್ರಮಕ್ಕೆ ಅಮಿತ್ ಶಾ ಆಗಮಿಸಿದ್ದರು. ಅವರ ಹೆಲಿಕಾಪ್ಟರ್ ಮುಂಬೈನಿಂದ ಸುಮಾರು 160 ಕಿಲೋಮೀಟರ್ ದೂರದಲ್ಲಿರುವ ನಾಸಿಕ್ ನ ಓಜರ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮಿತ್ ಶಾ ಅವರ ಹೆಲಿಕಾಪ್ಟರ್ ನಾಸಿಕ್ ನಿಂದ 70 ಕಿಲೋಮೀಟರ್ ದೂರದಲ್ಲಿರುವ ಅಹ್ಮದ್ ನಗರ್ ಜಿಲ್ಲೆಯ ಅಕೋಲೆಗೆ ತೆರಳುತ್ತಿತ್ತು, ಅಲ್ಲಿ ಶಾ ಅವರು ಮತದಾನ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಮಧ್ಯಾಹ್ನ 2: 25 ಕ್ಕೆ ಓಜರ್ ವಿಮಾನ ನಿಲ್ದಾಣದಲ್ಲಿ ಚಾಪರ್ ಇಳಿಯಲು ಪೈಲಟ್ ನಿರ್ಧರಿಸಿದ್ದಾರೆ ಎಂದು ಹೇಳಿದರು.
40 ನಿಮಿಷಗಳ ನಿಲುಗಡೆಯ ನಂತರ, ಮಧ್ಯಾಹ್ನ 3:08 ಗಂಟೆಗೆ ಅಹ್ಮದ್ ನಗರ್ ಕ್ಕೆ ಹೆಲಿಕಾಪ್ಟರ್ ಹೊರಟಿತು' ಎಂದು ಅವರು ಮಾಹಿತಿ ನೀಡಿದರು. ಅಮಿತ್ ಶಾ ಈ ಹಿಂದೆ ಉತ್ತರ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ನವಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದರು.