ದೇವರನಾಡು ಕೇರಳದಲ್ಲಿ ವರುಣನ ರೌದ್ರ ನರ್ತನಕ್ಕೆ 29 ಬಲಿ

ವೈಮಾನಿಕ ಸಮೀಕ್ಷೆ ನಡೆಸಿದ ಕೇರಳ ಸಿಎಂ ಪಿಣರಾಯ್ ವಿಜಯನ್.

Last Updated : Aug 11, 2018, 11:07 AM IST
ದೇವರನಾಡು ಕೇರಳದಲ್ಲಿ ವರುಣನ ರೌದ್ರ ನರ್ತನಕ್ಕೆ 29 ಬಲಿ title=

ತಿರುವನಂತಪುರಂ: ದೇವರನಾಡು ಕೇರಳದಲ್ಲಿ ವರುಣನ ರೌದ್ರ ನರ್ತನಕ್ಕೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿದೆ. ರಾಜ್ಯದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ, ಭೂಕುಸಿತಗಳಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇದೇ ವೇಳೆ ಕೇರಳ ಮುಖ್ಯಮಂತ್ರಿ ಪಿನಾರಯಿ ವಿಜಯನ್ ಅವರು ಪ್ರವಾಹಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುವ ಪ್ರಯತ್ನ ಮಾಡಿದ್ದಾರೆ. ಅದರೆ, ಇಡುಕ್ಕಿಯಲ್ಲಿ ಇಳಿಯಬೇಕಿದ್ದ ಅವರ ಹೆಲಿಕಾಪ್ಟರ್​ ವಯನಾಡಿನಲ್ಲಿ ಇಳಿದಿದೆ.

ವೈಮಾನಿಕ ಸಮೀಕ್ಷೆ ನಡೆಸಿ ನಂತರ ಇಡುಕ್ಕಿಯಲ್ಲಿಯೇ ಅಧಿಕಾರಿಗಳ, ಸಚಿವರ ಸಭೆ ನಡೆಸಲು ಕೇರಳ ಸಿಎಂ ಉದ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಮೊದಲು ಎರ್ನಾಕುಲಂ, ಅಲೆಪ್ಪುವಾ, ವಯನಾಡ್​, ಕೋಯಿಕ್ಕೋಡ್​, ಮಲ್ಲಪುರಂ ಭಾಗದಲ್ಲಿ ವಿರೋಧ ಪಕ್ಷದ ನಾಯಕ ರಮೇಶ್​ ಚೆನ್ನಿತ್ತಾಲ ಮತ್ತು ಕಂದಾಯ ಸಚಿವ ಚಂದ್ರಶೇಖರನ್​ ಅವರೊಂದಿಗೆ ಸಿಎಂ ವೈಮಾನಿಕ ಸಮೀಕ್ಷೆ ಆರಂಭಿಸಿದ್ದರು. ಇದನ್ನು ಮುಗಿಸಿದ ನಂತರ ಇಡುಕ್ಕಿಯ ಕಟ್ಟಪ್ಪಾನ ಎಂಬಲ್ಲಿ ಇಳಿಯಬೇಕಿದ್ದ ಸಿಎಂ ಅವರಿದ್ದ ಹೆಲಿಕಾಪ್ಟರ್​ ವಯನಾಡಿನಲ್ಲಿ ಇಳಿದಿದೆ.

ಇಡುಕ್ಕಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಈ ಭಾರೀ ಮಳೆಯಿಂದಾಗಿ ನದಿ ನೀರು ಹೆಚ್ಚಾದ ಪರಿಣಾಮ ಇಡುಕ್ಕಿ ಡ್ಯಾಂನ ಎಲ್ಲಾ ಗೇಟುಗಳನ್ನೂ ತೆರೆಯಲಾಗಿದೆ. 40 ವರ್ಷಗಳಲ್ಲೇ  ಮೊದಲ ಬಾರಿ ಇಡುಕ್ಕಿ ಜಲಾಶಯದ ಎಲ್ಲಾ ಗೇಟ್ ಗಳನ್ನು ತೆರೆಯಲಾಗಿದೆ. ಅತಿಯಾದ ನೀರು ಹರಿದುಬಂದ ಹಿನ್ನೆಲೆಯಲ್ಲಿ ಮನೆಗಳು, ಗದ್ದೆಗಳು ಮುಳುಗಡೆಯಾಗಿವೆ. ಹಲವು ಪ್ರದೇಶಗಳಲ್ಲಿ ರಸ್ತೆಗಳಿಗೆ ಹಾನಿಯಾಗಿರುವ ಕಾರಣ ಪ್ರವಾಸಿಗರಿಗೂ ಎಚ್ಚರಿಕೆ ನೀಡಲಾಗಿದೆ. ಇಡುಕ್ಕಿ, ಎರ್ನಾಕುಲಂ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಹಾನಿಯಾಗಿದೆ ಎನ್ನಲಾಗಿದೆ. 
 

Trending News