ನವದೆಹಲಿ: ಚುನಾವಣೆ ಬಂದರೆ ಸಾಕು ಎಲ್ಲ ರಾಜಕೀಯ ಪಕ್ಷಗಳು ಮತಕ್ಕಾಗಿ ಬಗೆ ಬಗೆಯ ತಂತ್ರಗಳನ್ನು ಬಳಸಲು ಮುಂದಾಗುತ್ತಾರೆ.ಆದರೆ ಈಗ ಇದಕ್ಕೆಲ್ಲ ಕಡಿವಾಣ ಹಾಕಲು ಚುನಾವಣಾ ಆಯೋಗ ಮುಂದಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯತೆ ಹೆಸರಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸೈನಿಕರನ್ನು ಬಳಸಿಕೊಳ್ಳುವ ಹಾಗಿಲ್ಲ ಮತ್ತು ಅವರ ಫೋಟೋಗಳನ್ನು ಬಳಸಿಕೊಳ್ಳುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ರಾಷ್ಟ್ರೀಯ ಹಾಗೂ ರಾಜ್ಯ ಪಕ್ಷಗಳ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಚುನಾವಣಾ ಆಯೋಗ ಈ ವಿಚಾರವನ್ನು ಸ್ಪಷ್ಟಪಡಿಸಿದೆ. ಸೈನ್ಯದ ಮುಖ್ಯಸ್ಥರು ಅಥವಾ ಸಿಬ್ಬಂದಿಗಳು ಯಾವುದೇ ಪಕ್ಷಕ್ಕೆ ಸಂಬಂಧಪಟ್ಟಿರುವುದಿಲ್ಲ ಆದ್ದರಿಂದ ಅವರ ಫೋಟೋಗಳನ್ನು ಪ್ರಚಾರದಲ್ಲಿ ಬಳಸಿಕೊಳ್ಳುವ ಹಾಗಿಲ್ಲ ಎಂದು ಸೂಚನೆ ನೀಡಿದೆ.ಚುನಾವಣಾ ಆಯೋಗ ಕಾರ್ಯದರ್ಶಿ ಪ್ರಮೋದ್ ಕುಮಾರ್ ಶರ್ಮಾ ಅವರು 2014ರ ಚುನಾವಣೆಗೂ ಮೊದಲು ಬರೆದ ಪತ್ರದ ಮೂಲಕ ಮತ್ತೊಮ್ಮೆ ನೆನಪಿಸಿದ್ದಾರೆ.
ಕೆಲವು ಪಕ್ಷಗಳು ಈಗಾಗಲೇ ತಮ್ಮ ಪ್ರಚಾರದಲ್ಲಿ ಸೇನಾ ಸಿಬ್ಬಂಧಿ ಫೋಟೋಗಳನ್ನು ಬಳಸಿಕೊಳ್ಳುತ್ತಿರುವ ವಿಚಾರ ಚುನಾವಣಾ ಆಯೋಗದ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಈಗ ಅದು ಮತ್ತೊಮ್ಮೆ ಎಲ್ಲ ಪಕ್ಷಗಳಿಗೆ ಸೂಚನೆ ನೀಡಿದೆ.